ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಬಾರ್‌ನಲ್ಲಿ ಮೇ 19ರಂದು ನಡೆದಿದ್ದ ಚುಂಚಗನಹಳ್ಳಿಯ ಸುನಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಜ್ಜಹಳ್ಳಿಯ ನಿಶಾಂತ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲೂಕು ಅಜ್ಜಹಳ್ಳಿಯ ಎ.ಎಸ್.ವಿಷಕಂಠ ಪುತ್ರ ಎ.ವಿ.ನಿಶಾಂತ್ (26), ಈತನ ಸ್ನೇಹಿತರಾದ ಕೊಪ್ಪ ಹೋಬಳಿ ಚಿಕ್ಕದೊಡ್ಡಿ ಗ್ರಾಮದ ದೇವರಾಜು ಪುತ್ರ ಕಾರ್ತಿಕ್ (28) ಹಾಗೂ ಅಜ್ಜಹಳ್ಳಿಯ ಸಿ.ಕೆ.ಬೋರೇಗೌಡನ ಪುತ್ರ ಸಿ.ಡಿ.ರವಿ ಅಲಿಯಾಸ್ ಕುಳ್ಳ (27) ಬಂಧಿತ ಆರೋಪಿಗಳು.
ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೇ 21ರಂದು ಮಳವಳ್ಳಿಯ ಕೊಳ್ಳೇಗಾಲಕ್ಕೆ ಹೋಗುವ ರಸ್ತೆಯಲ್ಲಿ ಬಂಧಿಸಲಾಗಿದೆ. ಮೂವರು ಆರೋಪಿಗಳು ಮೇ 19ರಂದು ಚುಂಚಗನಹಳ್ಳಿಯ ಕೃಷ್ಣರ ಪುತ್ರ ಸುನಿಲ್ (29) ತನ್ನ ಸ್ನೇಹಿತರಾದ ಸಿದ್ದರಾಜು ಹಾಗೂ ಸತೀಶ್ ಅವರೊಂದಿಗೆ ತಾಲೂಕು ಕೆ.ಹೊನ್ನಲಗೆರೆ ಗ್ರಾಮದ ದೀಪಾ ಬಾರ್‌ನಲ್ಲಿ ಮದ್ಯಪಾನ ಮಾಡಿದ ನಂತರ ಬಾರ್ ಕ್ಯಾಶಿಯರ್ ನನ್ನು ಬಾಸ್ ಎನ್ನುವ ವಿಚಾರಕ್ಕೆ 2 ಗುಂಪುಗಳ ನಡುವೆ ತಲ್ಲಾಟ, ನೂಕಾಟ ನಡೆದು ಸಣ್ಣ ಪ್ರಮಾಣದ ಗಲಾಟೆಯಾಗಿತ್ತು.ನಂತರ ಸುನೀಲ್ ನನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆನಂತರ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಎ.ವಿ.ನಿಶಾಂತ್
ಕೆ.ಹೊನ್ನಲಗೆರೆಯ ಚೌಡೇಶ್ವರಿ ಸಮುದಾಯ ಭವನದ ಬಳಿ ಮೂವರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಬಂದ ಸುನಿಲ್ ನನ್ನು
ಅಡಗಟ್ಟಿ ಮಾರಕಾಸ್ತ್ರಗಳಿಂದ ಕತ್ತು ಸೀಳಿ ಕೊಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದನು.
ನಂತರ ಸುನಿಲ್ ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದನು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಬಾ ರಾಣಿ, ಎಎಸ್‌ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಎಸ್. ಬಿ.ಯಶವಂತ ಕುಮಾರ್, ಮದ್ದೂರು ಠಾಣೆ ಸಿಪಿಐ ಎಚ್.ಎಸ್. ನವೀನ, ಗ್ರಾಮಾಂತರ ಠಾಣೆ ಸಿಪಿಐ ನಾರಾಯಣಿ, ಪಿಎಸ್ಐ ಗಳಾದ ಪಿ.ರವಿ, ಕಮಲಾಕ್ಷಿ, ಎಎಸ್ಐ ಶ್ರೀನಿವಾಸ್ ಆಚಾರಿ, ವೆಂಕಟೇಶ್, ಶಿವರಾಜು, ಗಣೇಶ್ ಬಾಬು, ಸಿಬ್ಬಂದಿ ಮಹೇಶ್, ಎಂ. ಮಹದೇವ, ಮಹದೇವಸ್ವಾಮಿ ,ಶಿವರಾಜು ,ಸಿದ್ದರಾಜು, ಮಹೇಶ್, ಲೋಕೇಶ್, ರವಿಕಿರಣ್, ಶರತ್, ಮಂಜುನಾಥ್, ಪ್ರಸನ್ನ ಅವರ ತಂಡ ಸತತವಾಗಿ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.ಆರೋಪಿಗಳನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮತ್ತೆ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.