ಪೆಪ್ಪರ್‌ ಸ್ಪ್ರೇ ಮಾಡಿ ಮಚ್ಚಿಂದ ಹೊಡೆದು ದರೋಡೆ

| Published : Feb 03 2024, 01:47 AM IST

ಸಾರಾಂಶ

ಸಿಗರೆಟ್‌ ಮಾರಾಟದಿಂದ ಸಂಗ್ರಹಿಸಿದ್ದ ಹಣವನ್ನು ಪೆಪ್ಪರ್‌ ಸ್ಪ್ರೇ ಮಾಡಿ ದೋಚಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಗರೆಟ್‌ ವಿತರಣಾ ಕಂಪನಿಯ ಉದ್ಯೋಗಿಯ ಮೇಲೆ ಮೂವರು ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆಗೈದು ₹14.10 ಲಕ್ಷ ನಗದು ದರೋಡೆ ಮಾಡಿ ಸಿನಿಮೀಯ ಶೈಲಿಯಲ್ಲಿ ಪರಾರಿ ಆಗಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಂ.ಡಿ.ಏಜೆನ್ಸಿಯ ಐಟಿಸಿ ಸಿಗರೆಟ್‌ ವಿತರಣಾ ಕಂಪನಿ ಉದ್ಯೋಗಿ ಗೋಪಾಲ್‌(29) ಹಲ್ಲೆಗೆ ಒಳಗಾಗಿ ಹಣ ಕಳೆದುಕೊಂಡವರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ದೂರುದಾರ ಗೋಪಾಲ್‌ ಮಿಂಟೋ ಆಸ್ಪತ್ರೆ ಬಳಿ ಇರುವ ಎಂ.ಡಿ.ಸನ್ಸ್‌ ಏಜೆನ್ಸಿಯವರ ಐಟಿಸಿ ಸಿಗರೆಟ್‌ ವಿತರಣಾ ಕಂಪನಿಯಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಏಜೆನ್ಸಿಯಿಂದ ನಗರದ ವಿವಿಧೆಡೆ ಚಿಲ್ಲರೆ ಅಂಗಡಿಗಳಿಗೆ ಸಿಗರೆಟ್‌ ನೀಡಿ, ವಾರಕ್ಕೊಮ್ಮೆ ಹಣ ಸಂಗ್ರಹಿಸಲಾಗುತ್ತದೆ. ಗುರುವಾರ ಮಾರುತಿ ಸರ್ಕಲ್‌, ಉಲ್ಲಾಳು, ಮುದ್ದಿನಪಾಳ್ಯ, ಪಾಪಿರೆಡ್ಡಿಪಾಳ್ಯ ಮಾರ್ಗದಲ್ಲಿ ಹಣ ಸಂಗ್ರಹಿಸಬೇಕಿತ್ತು. ಮಾಲೀಕರು ಕಂಪನಿಯ ಕ್ಯಾಶಿಯರ್‌ ಜಬಿಗೆ ಕಚೇರಿಯಲ್ಲೇ ಇರುವಂತೆ ಹೇಳಿ, ಹಣ ಸಂಗ್ರಹಿಸಿಕೊಂಡು ಬರಲು ಗೋಪಾಲ್‌ಗೆ ಸೂಚಿಸಿದ್ದಾರೆ.

ಅದರಂತೆ ಗೋಪಾಲ್‌, ಡೆಲಿವರಿ ಬಾಯ್‌ ರೆಹಮಾನ್‌ ಮತ್ತು ಚಾಲಕ ಆಸೀಫ್‌ ಮೂವರು ಟಾಟಾ ಏಸ್‌ ವಾಹನಕ್ಕೆ ಸಿಗರೆಟ್‌ ಲೋಡ್‌ ಮಾಡಿಕೊಂಡು ನಿಗದಿತ ಮಾರ್ಗದಲ್ಲಿ ಚಿಲ್ಲರೆ ಅಂಗಡಿಗಳಿಗೆ ಸಿಗರೆಟ್‌ ನೀಡುತ್ತಾ ಹಣ ಸಂಗ್ರಹಿಸಲು ಮುಂದಾಗಿದ್ದಾರೆ. ಮಧ್ಯಾಹ್ನ 1.10ರ ಸುಮಾರಿಗೆ ನಾಗರಬಾವಿ 2ನೇ ಹಂತದ 11ನೇ ಬ್ಲಾಕ್‌ನ 2ನೇ ಸಿ ಕ್ರಾಸ್‌ನಲ್ಲಿರುವ ಮಮತ ಸೂಪರ್‌ ಬಜಾರ್‌ ಅಂಗಡಿಗೆ ಬಂದಿದ್ದಾರೆ. ಈ ವೇಳೆ ರೆಹಮಾನ್‌ ಸಿಗರೆಟ್‌ ಬಾಕ್ಸ್‌ಗಳನ್ನು ಡೆಲಿವರಿ ಕೊಟ್ಟು ಹೊರಗಡೆ ಬಂದು ನಿಂತಿದ್ದಾನೆ. ಚಾಲಕ ಅಸೀಫ್‌ ವಾಹನದಲ್ಲೇ ಕುಳಿತಿದ್ದಾನೆ.

ಹಲ್ಲೆಗೈದು ದರೋಡೆ ಮಾಡಿ ಎಸ್ಕೇಪ್‌:

ಈ ವೇಳೆ ಗೋಪಾಲ್‌ ಮಮತ ಸೂಪರ್ ಬಜಾರ್‌ ಅಂಗಡಿ ಮಾಲೀಕರಿಂದ ಹಣ ಪಡೆಯಲು ನಿಂತಿದ್ದಾಗ, ಡಿಯೋ ದ್ವಿಚಕ್ರ ವಾಹನದಲ್ಲಿ ಮೂವರು ದುಷ್ಕರ್ಮಿಗಳು ಅಂಗಡಿ ಬಳಿ ಬಂದಿದ್ದಾರೆ. ಈ ವೇಳೆ ಓರ್ವ ದ್ವಿಚಕ್ರ ವಾಹನದಲ್ಲೇ ಕುಳಿತ್ತಿದ್ದು, ಮತ್ತಿಬ್ಬರು ಗೋಪಾಲ್‌ ನಿಂತಿದ್ದ ಕಡೆಗೆ ಬಂದಿದ್ದಾರೆ. ಏಕಾಏಕಿ ಪೆಪ್ಪರ್‌ ಸ್ಪ್ರೇ ತೆಗೆದು ಗೋಪಾಲ್‌ನತ್ತ ಸ್ಪ್ರೇ ಮಾಡಿದ್ದಾರೆ. ಬಳಿಕ ಓರ್ವ ಮಚ್ಚು ತೆಗೆದು ಉಲ್ಟಾ ಮಾಡಿ ಗೋಪಾಲ್‌ ಮೇಲೆ ಹಲ್ಲೆ ಮಾಡಿದ್ದಾನೆ. ಮತ್ತೊಬ್ಬ ಕೈಯಲ್ಲಿ ಗನ್‌ ಹಿಡಿದುಕೊಂಡಿದ್ದಾನೆ. ಮಚ್ಚಿನಿಂದ ಹಲ್ಲೆ ಮಾಡಲು ಶುರು ಮಾಡುತ್ತಿದ್ದಂತೆ ಗೋಪಾಲ್‌ ಚೀರಾಡಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಹಣದ ಬ್ಯಾಗ್‌ಗೆ ದುಷ್ಕರ್ಮಿ ಮಚ್ಚು ಬೀಸಿದ್ದಾನೆ. ಈ ವೇಳೆ ಬ್ಯಾಗ್‌ ತುಂಡಾಗಿ ಬಿದ್ದಿದೆ. ತಕ್ಷಣ ಆ ಬ್ಯಾಗ್‌ ಎತ್ತಿಕೊಂಡು ಮೂವರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.

ಗೋಪಾಲ್‌ ಚೀರಾಟ ಕೇಳಿ ಚಾಲಕ ಆಸೀಫ್‌, ಡೆಲಿವರಿ ಬಾಯ್‌ ರೆಹಮಾನ್‌ ಓಡಿ ಬಂದಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗೋಪಾಲ್‌ ಅವರು ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೂವರೂ ಹೆಲ್ಮೆಟ್‌ ಧರಿಸಿದ್ದರು

ಒಂದೇ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಮ್ಮ ಮುಖ ಕಾಣದಂತೆ ಪುರ್ಣ ಪ್ರಮಾಣದ ಹೆಲ್ಮೆಟ್‌ ಧರಿಸಿದ್ದರು. ಯಾವುದೇ ಅಬ್ಬರ ಇಲ್ಲದೆ ಗೋಪಾಲ್‌ ಬಳಿ ಬಂದು ಏಕಾಏಕಿ ಹಲ್ಲೆಗೈದು ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ದುಷ್ಕರ್ಮಿಗಳ ಪತ್ತೆಗೆ ತನಿಖೆಗೆ ಇಳಿದಿರುವ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳು ಗೋಪಾಲ್‌ ಅವರನ್ನು ಹಿಂಬಾಲಿಸಿ ಸಮಯ ನೋಡಿ ದಾಳಿ ಮಾಡಿ ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಹೀಗಾಗಿ ಗೋಪಾಲ್‌ ಯಾವ ಅಂಗಡಿಯಿಂದ ಹಣ ಸಂಗ್ರಹಿಸಲು ಆರಂಭಿಸಿದ್ದರೋ ಆ ಸ್ಥಳದಿಂದ ಘಟನಾ ಸ್ಥಳಕ್ಕೆ ಬರುವ ಮಾರ್ಗದ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.ಉದ್ಯೋಗಿಗಳ ವಿಚಾರಣೆ

ಹಲ್ಲೆಗೆ ಒಳಗಾದ ಗೋಪಾಲ್‌, ವಾಹನದ ಚಾಲಕ ಆಸೀಫ್‌ ಹಾಗೂ ಡೆಲಿವರಿ ಬಾಯ್‌ ರೆಹಮಾನ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದವರು, ಇತ್ತೀಚೆಗೆ ಕೆಲಸ ಬಿಟ್ಟವರು ಸೇರಿದಂತೆ ಹಾಲಿ ಮತ್ತು ಮಾಜಿ ಉದ್ಯೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ.