ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.ಮೈಸೂರು ಇಟ್ಟೆಗೆಗೂಡಿನ ನಿವಾಸಿ ಅಕ್ಷಯ್ (26) ಮೃತಪಟ್ಟ ದುರ್ದೈವಿ. ಸುಧೀರ್ ಸೇರಿದಂತೆ ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ವೇಳೆ ಮೇಲ್ಸೆತುವೆ ಬಳಿ ಎರಡು ಕಾರುಗಳು ವೇಗವಾಗಿ ಬಂದು ಮುಖಾಮುಖಿ ಡಿಕ್ಕಿಯಾಗಿವೆ. ಇದರಿಂದ ಕಾರುಗಳು ಸಂಪೂರ್ಣ ಜಖಂಗೊಂಡಿವೆ.ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಪೂರ್ಣವಾಗಿ ನಜ್ಜುನುಜ್ಜಾಗಿದ್ದ ಕಾರುಗಳ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವನಜಾಕ್ಷಿ ರಾಮರಾಜು ನಿಧನಮದ್ದೂರು: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ವನಜಾಕ್ಷಿ ರಾಮರಾಜು (57) ಅನಾರೋಗ್ಯದಿಂದ ಬುಧವಾರ ಮುಂಜಾನೆ ನಿಧನರಾದರು.ಅವರಿಗೆ ಪತಿ ನಿವೃತ್ತ ಕೆಇಬಿ ಎಂಜಿನಿಯರ್ ಕೆ.ಆರ್. ರಾಮರಾಜು, ಪುತ್ರಿಯರಾದ ಡಾ.ಕೆ.ಆರ್. ಸುಚೇತ, ಆಧ್ಯಾಪಕಿ ಶ್ವೇತ ಹಾಗೂ ಪುತ್ರ ಸುಪ್ರೀತ್ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಕದಲೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 12 ಕ್ಕೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ವನಜಾಕ್ಷಿ ರಾಮರಾಜು ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅಲ್ಲದೇ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿ, ಪುರಸಭಾ ಸದಸ್ಯರಾಗಿ ಹಾಗೂ ಮದ್ದೂರು ಶಿಂಷಾ ಬ್ಯಾಂಕ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ವನಜಾಕ್ಷಿ ನಿಧನಕ್ಕೆ ಶಾಸಕ ಕೆ.ಎಂ. ಉದಯ್, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಕೆ. ಸತೀಶ, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಅಶೋಕ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.