ಸಾರಾಂಶ
ಬೆಂಗಳೂರು : ಐಟಿಪಿಎಲ್ ಬಸ್ ನಿಲ್ದಾಣದ ಬಳಿ ಪ್ರಯಾಣಿಕನಿಂದ ಹಲ್ಲೆಗೆ ಒಳಗಾದ ನಿರ್ವಾಹಕ ಯೋಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಸಂಜೆ 5.30ರ ವೇಳೆಗೆ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ಜಾರ್ಖಂಡ್ ಮೂಲದ ಪ್ರಯಾಣಿಕ ಹರ್ಷ ಸಿನ್ಹಾ ಅವರಿಗೆ ಬಸ್‌ನ ದ್ವಾರದಿಂದ ದೂರ ನಿಲ್ಲುವಂತೆ ನಿರ್ವಾಹಕ ಸೂಚಿಸಿದ್ದು, ಅದರಿಂದ ಸಿಟ್ಟುಗೊಂಡ ಹರ್ಷ ಸಿನ್ಹಾ ಯೋಗೇಶ್ ಮೇಲೆ ಚಾಕುವಿನಿಂದ ಇರಿದಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯೋಗೇಶ್ ಅವರನ್ನು ಪ್ರಯಾಣಿಕರು ಮತ್ತು ಸಾರ್ವಜನಿಕರು ನೆರವಿನೊಂದಿಗೆ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಯೋಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಹತಾಶೆಯಿಂದ ಕೃತ್ಯ: ಹರ್ಷ
ಆರೋಪಿ ಹರ್ಷ ಸಿನ್ಹಾನನ್ನು ವೈಟ್‌ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಕಳೆದ 15 ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದೆ. ನಂತರ ಎಲ್ಲಿಯೂ ಕೆಲಸ ಸಿಗದ ಹಿನ್ನೆಲೆಯಲ್ಲಿ ಹತಾಶೆಗೆ ಒಳಗಾಗಿ ಈ ಕೃತ್ಯ ಎಸಗಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಹರ್ಷ ಸಿನ್ಹಾ ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕ ಯೋಗೇಶ್ ಮೇಲೆ ಚಾಕುವಿನಿಂದ ಇರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಖಂಡನೆ ವ್ಯಕ್ತವಾಗಿದೆ.