ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಓಯೋ ರೂಮ್‌ಗೆ ಕರೆದೊಯ್ದು ಪೇದೆ ಅತ್ಯಾಚಾರ : ಬಂಧನ

| N/A | Published : Feb 25 2025, 02:01 AM IST / Updated: Feb 25 2025, 03:59 AM IST

man raped 18 years old girl

ಸಾರಾಂಶ

ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡು ಬಳಿಕ ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಆರೋಪದಡಿ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡು ಬಳಿಕ ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಆರೋಪದಡಿ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ಕಾನ್‌ಸ್ಟೆಬಲ್‌ ಅರುಣ್‌ ತೋನೆಪ ಮತ್ತು ಸಂತ್ರಸ್ತೆಯ ಪ್ರಿಯಕರ ವಿಕ್ಕಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಬಿಎನ್‌ಎಸ್‌ ಕಾಯ್ದೆಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಸಂತ್ರಸ್ತೆಯ ಪ್ರಿಯಕರ ವಿಕ್ಕಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇದೀಗ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಹದಿನೇಳು ವರ್ಷದ ಸಂತ್ರಸ್ತೆ ತನ್ನ ಕುಟುಂಬದ ಜತೆಗೆ ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ಎದುರು ಮನೆಯ ವಿಕ್ಕಿ ಎಂಬಾತ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ಬಳಿಕ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜತೆಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಯಾರಿಗೂ ಹೇಳದಂತೆ ಅಪ್ರಾಪ್ತೆ ಮೇಲೆ ಹಲ್ಲೆ ಮಾಡಿದ್ದಾನೆ. ವಿಕ್ಕಿ ತನ್ನ ಮೇಲೆ ನಡೆಸಿದ ಅತ್ಯಾಚಾರದ ಬಗ್ಗೆ ಅಪ್ರಾಪ್ತೆ ತಾಯಿ ಬಳಿ ಕೇಳಿಕೊಂಡಿದ್ದಳು. ಹೀಗಾಗಿ ಅಪ್ರಾಪ್ತೆಯ ತಾಯಿ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅತ್ಯಾಚಾರ ವಿಚಾರ ತಿಳಿದುಕೊಂಡಿದ್ದ ಬೊಮ್ಮನಹಳ್ಳಿ ಠಾಣೆ ಪೊಲೀಸ್‌ ಕಾನ್‌ಸ್ಟೆಬಲ್‌ ಅರುಣ್‌, ಈ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಹಾಗೂ ಕೆಲಸ ಕೊಡಿಸುವುದಾಗಿ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದಾನೆ. ಕಳೆದ ಡಿ.18ರಂದು ಸಂತ್ರಸ್ತೆಯನ್ನು ಕರೆಸಿಕೊಂಡು ಬಿಟಿಎಂ ಲೇಔಟ್‌ನ ಪೇಯಿಂಗ್‌ ಗೆಸ್ಟ್‌ನಲ್ಲಿ (ಪಿಜಿ) ಇರಿಸಿಕೊಂಡಿದ್ದ. ಬಳಿಕ ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಮೈಕೋ ಲೇಔಟ್‌ ಠಾಣೆ ಪೊಲೀಸರು ಕಾನ್‌ಸ್ಟೆಬಲ್‌ ಅರುಣ್‌ ಮತ್ತು ಸಂತ್ರಸ್ತೆಯ ಪ್ರಿಯಕರ ವಿಕ್ಕಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಯರ್‌ ಕುಡಿಸಿ ರೇಪ್: ವಿಡಿಯೋ ಮಾಡಿ ಬೆದರಿಕೆ

ಕಳೆದ ಡಿ.22 ಮತ್ತು 30ರಂದು ಬಿಟಿಎಂ ಲೇಔಟ್‌ನ ಓಯೋ ರೂಮ್‌ಗೆ ಸಂತ್ರಸ್ತೆಯನ್ನು ಕರೆದೊಯ್ದು ಬಿಯರ್‌ ಕುಡಿಸಿದ್ದಾನೆ. ಸಂತ್ರಸ್ತೆ ಮತ್ತಿನಲ್ಲಿ ಇರುವಾಗ ಬಲವಂತವಾಗಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಅತ್ಯಾಚಾರದ ವಿಡಿಯೋಗಳು ನನ್ನ ಬಳಿ ಇದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.