ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ವಿವಾದ: ಮಹಿಳೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ...!

| Published : Jan 21 2025, 12:32 AM IST / Updated: Jan 21 2025, 04:41 AM IST

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪರವಾಗಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

 ಮಂಡ್ಯ : ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪರವಾಗಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೇವರಾಜು ಪತ್ನಿ ಮಂಜುಳಾ (48) ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯಾಗಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾದ ಮಂಜುಳಾ ಅವರನ್ನು ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಏನಾಯ್ತು?

ಹುಲ್ಕೆರೆ ಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಮೊದಲ 15 ತಿಂಗಳಿಗೆ ಶೃತಿ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಂದದ ಮೇರೆಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಅವರ ಅವಧಿ ಮುಗಿದ ಬಳಿಕ ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷರಾಗಿ ವೀಣಾ ಅವರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಅವರನ್ನು ಬಿಟ್ಟು ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ಕೆಲವರು ಆಯ್ಕೆ ಮಾಡಿಕೊಂಡರು. ಇದನ್ನು ಪ್ರಶ್ನಿಸಿ ಐವರು ನಿರ್ದೇಶಕರು ರಾಜೀನಾಮೆ ನೀಡಿದ್ದರು.

ಬಳಿಕ ಅಧ್ಯಕ್ಷರಾಗಿದ್ದವರು ರಾಜೀನಾಮೆ ನೀಡಿದ್ದ ಓರ್ವ ನಿರ್ದೇಶಕರನ್ನು ತಮ್ಮ ಪರ ಸೆಳೆದುಕೊಂಡು ಬಲವಂತವಾಗಿ ರಾಜೀನಾಮೆ ಕೊಡಿಸಿದ್ದಾರೆಂಬಂತೆ ಹೇಳಿಕೆ ಕೊಡಿಸಿದ್ದರು. ವಿವಾದದ ಹಿನ್ನೆಲೆಯಲ್ಲಿ ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಇಂದು ಏಕಾಏಕಿ ಸಭೆ ನಡೆಸಲು ಮುಂದಾದರು.

ಇದರಿಂದ ಅಸಮಾಧಾನಗೊಂಡ ಇತರೆ ನಿರ್ದೇಶಕರು ಸದಸ್ಯರೊಡಗೂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ನಡುವೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕಾರ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವೀಣಾ ಅವರ ಪರವಾಗಿ ಬಂದಿದ್ದ ಮಂಜುಳಾ ಅವರು ಅಸಮಾಧಾನಗೊಂಡು ವಿಷ ಸೇವಿಸಿ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.