ಬೆಂಗಳೂರು : ಸಂಪಿಗೆ ಥಿಯೇಟರ್‌ ಮಾಲೀಕರ ಮನೇಲಿ ದೋಚಿದ್ದ ನೇಪಾಳ ಮೂಲದ ದಂಪತಿ ಸೆರೆ

| Published : Nov 09 2024, 01:22 AM IST / Updated: Nov 09 2024, 04:28 AM IST

ಸಾರಾಂಶ

ಸಂಪಿಗೆ ಚಿತ್ರಮಂದಿರದ ಮಾಲೀಕರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.

 ಬೆಂಗಳೂರು : ನಗರದ ಸಂಪಿಗೆ ಚಿತ್ರಮಂದಿರದ ಮಾಲೀಕರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಗಣೇಶ್‌ ಮತ್ತು ಗೀತಾ ಬಂಧಿತರು. ಆರೋಪಿಗಳು ಅ.21ರಂದು ಜಯನಗರ 3ನೇ ಬ್ಲಾಕ್‌ 22ನೇ ಅಡ್ಡರಸ್ತೆ ನಿವಾಸಿ ನಾಗೇಶ್‌ ಅವರ ಮನೆಯಲ್ಲಿ ₹1.50 ಲಕ್ಷ ನಗದು ಹಾಗೂ ಸುಮಾರು 900 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ನಾಗೇಶ್‌ ಅವರ ಪುತ್ರ ವೆಂಕಟೇಶ್‌ ನಾಡುಬಿಡಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಸಂಪಿಗೆ ಥಿಯೇಟರ್‌ ಮಾಲೀಕರಾದ ನಾಗೇಶ್‌ ಅವರು ಜಯನಗರ 3ನೇ ಬ್ಲಾಕ್‌ನ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ನೇಪಾಳ ಮೂಲದ ಗಣೇಶ್‌ ಮತ್ತು ಗೀತಾ ಮನೆಗೆಲಸ ಮಾಡಿಕೊಂಡಿದ್ದರು. ಅ.21ರಂದು ಸಂಜೆ ಕಾರ್ಯಕ್ರಮ ನಿಮಿತ್ತ ನಾಗೇಶ್‌ ಅವರ ಪುತ್ರ ವೆಂಕಟೇಶ್‌ ಸೇರಿ ಕುಟುಂಬದ ಸದಸ್ಯರು ಹೊರಗೆ ಹೋಗಬೇಕಿತ್ತು. ಈ ವೇಳೆ ನಾಗೇಶ್‌ ಅವರನ್ನು ಸರಿಯಾಗಿ ನೋಡಿಕೊಳ್ಳುವಂತೆ ಗಣೇಶ್‌ ಮತ್ತು ಗೀತಾಗೆ ಸೂಚಿಸಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 9ಕ್ಕೆ ಮನೆಗೆ ವಾಪಸ್‌ ಬಂದಾಗ, ಕೆಲಸಗಾರರಾದ ಗಣೇಶ್‌ ಮತ್ತು ಗೀತಾ ಮನೆಯಲ್ಲಿ ಇರಲಿಲ್ಲ. ಬೆಡ್‌ ರೂಮ್‌ಗೆ ತೆರಳಿ ನೋಡಿದಾಗ, ನಾಗೇಶ್‌ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ರೂಮ್‌ನ ಕಬೋರ್ಡ್‌ ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಬೋರ್ಡ್‌ನಲ್ಲಿ ಇಡಲಾಗಿದ್ದ ಸುಮಾರು ₹1.50 ಲಕ್ಷ ನಗದು ಹಾಗೂ ಸುಮಾರು 900 ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.