ಮನೆ ಬಾಗಿಲಿಗೆ ಕೊರಿಯರ್‌ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಕೊರಿಯರ್‌ ಬಾಯ್‌ಗೆ ಚಾಕು ಇರಿತ!

| Published : Sep 02 2024, 02:02 AM IST / Updated: Sep 02 2024, 04:59 AM IST

ಸಾರಾಂಶ

ಮನೆ ಬಾಗಿಲಿಗೆ ಕೊರಿಯರ್‌ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಕೊರಿಯರ್‌ ಬಾಯ್‌ಗೆ ಚಾಕುವಿನಿಂದ ಇರಿದಿರುವುದು.

 ಬೆಂಗಳೂರು : ಮನೆ ಬಾಗಿಲಿಗೆ ಕೊರಿಯರ್‌ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಕೊರಿಯರ್‌ ವಿತರಿಸುವ ವ್ಯಕ್ತಿಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನೇಪಾಳ್ಯ ನಿವಾಸಿ ಅರ್ಬಾಜ್‌ (29) ಬಂಧಿತ. ಆರೋಪಿಯು ಆ.30ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಆನೇಪಾಳ್ಯದಲ್ಲಿ ಕೊರಿಯರ್‌ ವಿತರಿಸುವ ಮೊಹಮ್ಮದ್‌ ರಫಿ (32) ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಚಾಕು ಇರಿತಕ್ಕೆ ಒಳಗಾಗಿರುವ ಮೊಹಮ್ಮದ್‌ ರಫಿ ಆಡುಗೋಡಿ ನಿವಾಸಿಯಾಗಿದ್ದು, ಡಿಟಿಡಿಸಿ ಕೊರಿಯರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಅರ್ಬಾಜ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಮನೆ ವಿಳಾಸಕ್ಕೆ ಬುಕ್‌ ಮಾಡಿದ್ದ. ಹೀಗಾಗಿ ಆ.30ರಂದು ಮಧ್ಯಾಹ್ನ ರಫಿ ಆನೇಪಾಳ್ಯದ ಮುಖ್ಯರಸ್ತೆಗೆ ಬಂದು ಅರ್ಬಾಜ್‌ ಕರೆ ಮಾಡಿ ಕೊರಿಯರ್‌ ತೆಗೆದುಕೊಂಡು ಹೋಗುವಂತೆ ಹೇಳಿದ್ದ. ಆದರೆ, ಅರ್ಬಾಜ್ ಮುಖ್ಯರಸ್ತೆಯಿಂದ ಅಡ್ಡರಸ್ತೆಯಲ್ಲಿರುವ ಮನೆ ಬಳಿ ಬಂದು ಕೊರಿಯರ್‌ ನೀಡುವಂತೆ ಹೇಳಿದ್ದಾನೆ.

ತಾಯಿಯನ್ನು ವಾಪಾಸ್‌ ಕಳುಹಿಸಿದ ರಫಿ:

ಆದರೆ, ನಾನು ಅಡ್ಡರಸ್ತೆಗೆ ಬರುವುದಿಲ್ಲ ಮುಖ್ಯರಸ್ತೆಗೆ ಬಂದು ತೆಗೆದುಕೊಂಡು ಹೋಗುವಂತೆ ಅರ್ಬಾಜ್‌ಗೆ ಹೇಳಿದ್ದಾನೆ. ಈ ವೇಳೆ ಅರ್ಬಾಜ್‌ ಕೊರಿಯರ್ ತೆಗೆದುಕೊಂಡು ಬರುವಂತೆ ತಾಯಿಯನ್ನು ಮುಖ್ಯರಸ್ತೆಗೆ ಕಳುಹಿಸಿದ್ದಾನೆ. ಈ ವೇಳೆ ರಫಿ ಒಟಿಪಿ ಸಂಖ್ಯೆ ಹೇಳಿದರಷ್ಟೇ ಕೊರಿಯರ್‌ ನೀಡುವುದಾಗಿ ಹೇಳಿ ಅರ್ಬಾಜ್‌ ತಾಯಿಯನ್ನು ವಾಪಾಸ್‌ ಮನೆಗೆ ಕಳುಹಿಸಿದ್ದಾನೆ.

ಚಾಕು ತಂದು ಇರಿದು ಪರಾರಿ:

ಇದರಿಂದ ಕೋಪಗೊಂಡ ಅರ್ಬಾಜ್‌, ಮನೆಯಿಂದ ಚಾಕು ತೆಗೆದುಕೊಂಡು ಆನೇಪಾಳ್ಯದ ಮುಖ್ಯರಸ್ತೆಗೆ ಬಂದು ರಫಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ರಫಿಯ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಗಾಯಗೊಂಡು ಕುಸಿದು ಬಿದ್ದ ರಫಿಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿ ರಫಿಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕಾಯಾಚರಣೆ ನಡೆಸಿ ಆರೋಪಿ ಅರ್ಬಾಜ್‌ನನ್ನು ಬಂಧಿಸಿದ್ದಾರೆ. ಸದ್ಯ ಆಸ್ಪತ್ರೆ ತೀವ್ರಾ ನಿಗಾ ಘಟಕದಲ್ಲಿ ರಫಿಗೆ ಚಿಕಿತ್ಸೆ ಮುಂದುವರೆದಿದ್ದು, ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.