ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹಾಗೂ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್

| Published : Nov 07 2024, 11:53 PM IST / Updated: Nov 08 2024, 08:26 AM IST

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹಾಗೂ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹಾಗೂ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮಂಡ್ಯ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 ಮಂಡ್ಯ : ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹಾಗೂ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮಂಡ್ಯ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಟ್ಟಿಂಗ್ ದಂಧೆಗೆ ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಮಳವಳ್ಳಿ ತಾಲೂಕು ಟಿ.ಕಾಗೇಪುರದ ಕೆ.ಸಿ.ನಾಗೇಂದ್ರ (೨೯) ಎಂಬಾತನ ವಿರುದ್ಧ ಅದೇ ಗ್ರಾಮದ ರಾಜಣ್ಣ (೬೪) ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ರಾಜಣ್ಣನವರ ಮಗ ಪ್ರೀತಮ್‌ನನ್ನು ಬೆಟ್ಟಿಂಗ್ ಬುಕ್ಕಿಯಾದ ನಾಗೇಂದ್ರ ಅಕ್ರಮ ಬೆಟ್ಟಿಂಗ್ ದಂಧೆಗೆ ಇಳಿಸಿದ್ದನು. ಪ್ರೀತಮ್ ಆರ್.ಗೌಡ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದನು. ಕೆ.ಸಿ.ನಾಗೇಂದ್ರ ಎಂಬಾತ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುವ ಬುಕ್ಕಿಯಾಗಿದ್ದು, ಅವನು ಪ್ರೀತಮ್‌ಗೆ ದಿಢೀರ್ ಶ್ರೀಮಂತಿಕೆಯ ಆಮಿಷವೊಡ್ಡಿ ಆತನ ತಲೆ ಕೆಡಿಸಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗುವಂತೆ ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಿದ್ದಾರೆ.

ಮುಗ್ಧನಾಗಿದ್ದ ಪ್ರೀತಮ್‌ನನ್ನು ಕ್ರಿಕೆಟ್ ಬೆಟ್ಟಿಂಗ್‌ಗೆ ದಾಸನಾಗುವಂತೆ ನಾಗೇಂದ್ರ ಮಾಡಿದ್ದು, ೨೦೨೧ ಡಿಸೆಂಬರ್ ತಿಂಗಳಿನಿಂದ ೨೦೨೩ ಡಿಸೆಂಬರ್ ತಿಂಗಳವರೆಗೆ ಪ್ರೀತಮ್ ವ್ಯಾಟ್ಸಾಪ್ ನಂಬರ್ ೮೯೭೧೨೭೯೦೩೮ ಮೂಲಕ ಪಾಸ್‌ವರ್ಡ್, ಪಿನ್ ನಂಬರ್ ನೀಡಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿ ಸುಮಾರು ೨೦ ಲಕ್ಷ ರು. ಹಣ ಕಳೆದುಕೊಳ್ಳುವಂತೆ ಮಾಡಿದ್ದಾನೆ ಎಂದು ದೂರಿದ್ದಾರೆ.

ತದನಂತರ ಹಣವನ್ನು ವಸೂಲಿ ಮಾಡಲು ಬ್ಲಾಕ್‌ ಮೇಲ್ ಮಾಡಲಾರಂಭಿಸಿ ಅವ್ಯಾಚ್ಯ ಶಬ್ಧಗಳಿಂದ ಪ್ರೀತಮ್‌ನನ್ನು ನಿಂದಿಸಿದ್ದಾನೆ. ನೀನು ಬದುಕಿರುವುದಕ್ಕಿಂತ ಸಾಯುವುದೇ ಲೇಸು, ಹೋಗಿ ಸಾಯಿ ಎಂದು ಪ್ರೀತಮ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ರಾಜಣ್ಣ ದೂರಿನಲ್ಲಿ ದಾಖಲಿಸಿದ್ದಾರೆ.

ಪ್ರೀತಮ್ ವ್ಯವಸಾಯಗಾರನಾಗಿದ್ದು, ಆತನನ್ನು ಜೂಜಾಟದಲ್ಲಿ ತೊಡಗಿಸಬೇಡ ಎಂದು ಹಲವು ಬಾರಿ ನಾಗೇಂದ್ರನಿಗೆ ರಾಜಣ್ಣ ಎಚ್ಚರಿಕೆ ನೀಡಿದ್ದರು. ಆದರೂ ಕೇಳದೇ ಪ್ರೀತಮ್‌ನನ್ನು ಕಮೀಷನ್ ಆಸೆಗಾಗಿ ಜೂಜಿನಲ್ಲಿ ತೊಡಗಿಸಿದ್ದನು. ಬುಕ್ಕಿ ಕೆ.ಸಿ.ನಾಗೇಂದ್ರ ಪ್ರೀತಮ್‌ನಿಂದ ಕರ್ನಾಟಕ ಬ್ಯಾಂಕ್ ಮಳವಳ್ಳಿ ಶಾಖೆಗೆ ಸೇರಿದ ಚೆಕ್ ನಂ.೫೫೩೦೭೧ ಖಾಲಿ ಚೆಕ್ ಮತ್ತು ಆನ್‌ಡಿಮಾಂಡ್ ಪತ್ರವೊಂದಕ್ಕೆ ಬಲವಂತವಾಗಿ ಸಹಿ ಪಡೆದಿದ್ದಾನೆ. ಇದರಿಂದ ನಮ್ಮ ಕುಟುಂಬದವರು ದಿನವೂ ಜೀವ ಕೈಯಲ್ಲಿ ಹಿಡಿದು ಬದುಕುವಂತೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ನ.೪ರಂದು ಬೆಳಗ್ಗೆ ೮.೩೦ ರಲ್ಲಿ, ಮತ್ತೆ ಪ್ರೀತಂಗೆ ಬೆಟ್ಟಿಂಗ್ ಬಾಕಿ ಹಣ ಕೊಡುವಂತೆ ಜಗಳ ತೆಗೆದಿದ್ದು, ಸುತ್ತಮುತ್ತಲಿನವರು ಸಮಾಧಾನಪಡಿಸಿ ಕಳುಹಿಸಿದ್ದಾರೆ. ಕ್ರಿಕೆಟ್ ಬುಕ್ಕಿಯಾಗಿ ಜೂಜಾಟ ಆಡಿಸುತ್ತಿರುವ ಅಕ್ರಮ ಹಣ ಸಂಪಾದನೆ ದಂಧೆಯಲ್ಲಿ ತೊಡಗಿರುವ ಕೆ.ಸಿ.ನಾಗೇಂದ್ರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ಮಗನಿಗೆ ಆಗಿರುವ ಆನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

ಫಲ ನೀಡಿದ ಪ್ರತಿಭಟನೆ:

ಸೋಮವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತುರ್ತು ಸಭೆ ನಡೆಸಿದಾಗ ಸ್ವತಃ ದೂರುದಾರ ರಾಜಣ್ಣ, ಈ ಘಟನೆಯ ಬಗ್ಗೆ ವಿವರಿಸಿ, ಎಫ್‌ಐಆರ್‌ ದಾಖಲಿಸದ ಪೊಲೀಸರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಅವರು, ಇಂದೇ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗುವುದು ಎಂದು ಭರವಸೆ ನೀಡಿದ್ದರು, ಅದರಂತೆ ಎಫ್‌ಐಆರ್ ದಾಖಲಾಗಿದೆ.