ಈಜುತ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿದ್ದು ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯ ವಿರಿಜಾ ನಾಲೆಯಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಬೋರ್ಗಾವ್ ಗ್ರಾಮದ ರತಿರಾಂ ರಾವತ್ ಅವರ ಪುತ್ರ ವಿಶಾಲ್ ರಾವತ್ (13) ಮೊಸಳೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾನೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈಜುತ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿದ್ದು ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಪಾಲಹಳ್ಳಿಯ ವಿರಿಜಾ ನಾಲೆಯಲ್ಲಿ ನಡೆದಿದೆ.ಮಹಾರಾಷ್ಟ್ರ ಮೂಲದ ಬೋರ್ಗಾವ್ ಗ್ರಾಮದ ರತಿರಾಂ ರಾವತ್ ಅವರ ಪುತ್ರ ವಿಶಾಲ್ ರಾವತ್ (13) ಮೊಸಳೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಬಾಲಕನ ಕುತ್ತಿಗೆ ಹಾಗೂ ಎದೆ, ಕೈ ಕಾಲು ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಕಬ್ಬು ಕಡಿಯುವ ಕೂಲಿ ಕಾರ್ಮಿಕರಾಗಿರುವ ವಿಶಾಲ್‌ನ ಪೋಷಕರು ಕೆಲಸಕ್ಕಾಗಿ ಆಗಮಿಸಿ ಕೆಲದಿನಗಳಿಂದ ರಂಗನತಿಟ್ಟು ಪಕ್ಷಿಧಾಮದ ಸಮೀಪ ಜೋಪಡಿ ನಿರ್ಮಿಸಿಕೊಂಡು ಬೀಡು ಬಿಟ್ಟಿದ್ದರು. ವಿಶಾಲ್ ರಾವತ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೋಮವಾರ ವಿರಿಜಾ ನಾಲೆಯಲ್ಲಿ ಈಜಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.ಬಾಲಕನ ಜತೆಗಿದ್ದ ಸ್ನೇಹಿತರು ವಿಶಾಲ್ ಮೇಲೆ ಮೊಸಳೆ ದಾಳಿ ನಡೆಸಿದ ವೇಳೆ ಎದೆಗುಂದದೆ ಕೈಗೆ ಸಿಕ್ಕ ಕಲ್ಲುಗಳಿಂದ ನಿರಂತರವಾಗಿ ಹೊಡೆದು ಮೊಸಳೆಯಿಂದ ವಿಶಾಲ್‌ನನ್ನು ರಕ್ಷಿಸಿದ್ದಾರೆ.
ಬಳಿಕ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶಾಲ್‌ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.ವಿಷಯ ತಿಳಿದು ಬಾಲಕನ ಆರೋಗ್ಯ ವಿಚಾರಿಸಿರುವ ಶ್ರೀರಂಗಪಟ್ಟಣ ವಲಯ ಅರಣ್ಯಾಧಿಕಾರಿಗಳು, ರಂಗನತಿಟ್ಟು ವನ್ಯಜೀವಿ ಅರಣ್ಯ ಸಿಬ್ಬಂದಿಯೊಂದಿಗೆ ವಿರಿಜಾ ನಾಲೆಯಲ್ಲಿ ಬಾಲಕನ ಮೇಲೆ ದಾಳಿ ನಡೆಸಿರುವ ಮೊಸಳೆ ಸೆರೆಗಾಗಿ ಕೂಂಬಿಂಗ್ ಕಾರ್ಯಾಚಣೆ ನಡೆಸಿದ್ದಾರೆ.