ಸೈಬರ್ ಕ್ರೈಂ ಹೆಸರಿನಲ್ಲೂ₹40 ಸಾವಿರ ಕಿತ್ತ ಕಿಡಿಗೇಡಿ

| Published : Jan 23 2024, 01:45 AM IST

ಸಾರಾಂಶ

ಮಹಿಳೆಗೆ ಅಧಿಕ ಲಾಭದ ಆಸೆ ತೋರಿಸಿ ವಂಚಿಸಿದ ಸೈಬರ್‌ ವಂಚಕರು, ಬಳಿಕ ಪೊಲೀಸರ ಹೆಸರಲ್ಲೂ 40 ಸಾವಿರ ವಂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕ ಲಾಭದಾಸೆ ತೋರಿಸಿ ₹38 ಲಕ್ಷ ವಸೂಲಿ ಮಾಡಿದವರನ್ನು ಹಿಡಿಯುವುದಾಗಿ ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲೇ ಮಹಿಳೆಯೊಬ್ಬರಿಗೆ ಚಾಲಾಕಿ ವಂಚಕರು ಟೋಪಿ ಹಾಕಿದ್ದಾರೆ.

ಸ್ಯಾಂಕಿ ರಸ್ತೆಯ ಭಾರ್ಗವಿ ರಾವ್‌ ಮೋಸ ಹೋಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಭಾರ್ಗವಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮಗೆ ಅರೆಕಾಲಿಕ ಉದ್ಯೋಗ ಕೊಡುವುದಾಗಿ ಹೇಳಿದ್ದಾನೆ. ಇದರಲ್ಲಿ ಸುಲಭವಾಗಿ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂದಿದ್ದ. ಈ ಮಾತಿಗೆ ಭಾರ್ಗವಿ ಸಮ್ಮತಿಸಿದಾಗ ಅವರಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿದ್ದ. ತಾವು ಕಳುಹಿಸಿದ ಕಂಪನಿಯ ಲಿಂಕ್ ಬಳಸಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಆಸೆ ತೋರಿಸಿದ್ದ. ಅಂತೆಯೇ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹38.9 ಲಕ್ಷವನ್ನು ಅವರು ಸಂದಾಯ ಮಾಡಿದ್ದರು. ಇದಾದ ಬಳಿಕ ಭಾರ್ಗವಿ ಅವರಿಗೆ ಲಾಭಾಂಶ ನೀಡಿಲ್ಲ. ಹೀಗಿರುವಾಗ ಮತ್ತೆ ಅವರಿಗೆ ಕರೆ ಮಾಡಿದ ಕಿಡಿಗೇಡಿ, ನಾವು ಸೈಬರ್ ಕ್ರೈಂ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾನೆ. ಆಗ ತಾವು ಕಳೆದುಕೊಂಡಿರುವ ಹಣವನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಭಾರ್ಗವಿ ಅವರಿಂದ ₹40 ಸಾವಿರ ಸುಲಿಗೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.