ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚನೆಯ ಜಾಲವನ್ನು ಭೇದಿಸಿರುವ ನಗರದ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮೂವರನ್ನು ಬಂಧಿಸಿ, ಆರೋಪಿಗಳಿಂದ 6 ಮೊಬೈಲ್‌ ಜಪ್ತಿ ಮಾಡಿದ್ದಾರೆ.

-ಸೈಬರ್‌ ಕ್ರೈಂ । ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಜನರ ವಂಚಿಸುತ್ತಿದ್ದ ಕದೀಮರು । ಹರೀಶ ಎಂಬಾತನಿಂದ 93.58 ಲಕ್ಷ ರು. ವಂಚನೆ

ಕನ್ನಡಪ್ರಭ ವಾರ್ತೆ ​ಬೆಂಗಳೂರು

ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚನೆಯ ಜಾಲವನ್ನು ಭೇದಿಸಿರುವ ನಗರದ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮೂವರನ್ನು ಬಂಧಿಸಿ, ಆರೋಪಿಗಳಿಂದ 6 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಜಾರ್ಖಂಡ್ ಮೂಲದ ಅಮಿತ್ ಮಿಶ್ರಾ, ಬೆಂಗಳೂರಿನ ಜೆ.ಸಿ. ನಗರದ ತೌಸಿಫ್ ಅಹಮ್ಮದ್ ಹಾಗೂ ಜೀವನ್ ಭೀಮಾನಗರದ ಪರಶುರಾಮ್ ಸದಾನಂದ್ ಬಂಧಿತರು.​ ಈ ಸೈಬರ್ ವಂಚಕರ ವಿರುದ್ಧ ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಕೆ.ಎನ್‌.ಹರೀಶ್ ಕುಮಾರ್ ಎಂಬುವರು ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ದೂರುದಾರ ಹರೀಶ್‌ ಕುಮಾರ್‌ರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಆ್ಯಡ್ ಮಾಡಿದ್ದ ಆರೋಪಿಗಳು ಫಾರಲಾನ್‌ ಸಿಎಂ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯುವಂತೆ ಪ್ರಚೋದಿಸಿದ್ದರು. ಜತೆಗೆ ಹೆಚ್ಚಿನ ಲಾಭದ ಆಮಿಷವೊಡ್ಡಿದ್ದರು. ಇವರ ಮಾತನ್ನು ನಂಬಿದ ಹರೀಶ್‌ ಕುಮಾರ್‌ ಮೊದಲಿಗೆ 50 ಸಾವಿರ ರು. ಹೂಡಿದ್ದರು. ನಂತರ ವಂಚಕರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 93.58 ಲಕ್ಷ ರು. ಹೂಡಿಕೆ ಮಾಡಿದ್ದರು. ಬಳಿಕ ಯಾವುದೇ ಲಾಭಾಂಶ ನೀಡದೆ ವಂಚಿಸಿದ್ದರು. ಮೋಸ ಹೋದ ಹರೀಶ್ ಕುಮಾರ್ ಅವರು ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ತನಿಖೆಗೆ ಇಳಿದ ಪೊಲೀಸರು ನಾಗಮ್ಮ ಎಂಬುವರ ಇಂಡಸ್‌ ಬ್ಯಾಂಕ್‌ ಖಾತೆಯಲ್ಲಿ ಸೈಬರ್‌ ವಂಚನೆ ಹಣವನ್ನು ವರ್ಗ ಮಾಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಗರದ ಕಚುವನಹಳ್ಳಿಯ ಸೂಪರ್‌ ಒಯೋ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಅಕೌಂಟ್‌ಗಳನ್ನು (ನಕಲಿ ಖಾತೆ) ಸಂಗ್ರಹಿಸುವ ಜಾಲ ರಚಿಸಿ ಎಪಿಕೆ ಫೈಲ್‌ಗಳ ಮೂಲಕ ಮ್ಯೂಲ್ ಅಕೌಂಟ್‌ಗಳಲ್ಲಿ ವಂಚನೆಯ ಹಣವನ್ನು ವರ್ಗಾವಣೆ ಮಾಡಿ ವಂಚಿಸುತ್ತಿದ್ದರು. ಆರೋಪಿಗಳ 6 ಮೊಬೈಲ್ ಪರಿಶೀಲಿಸಿದಾಗ 507ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಪತ್ತೆಯಾಗಿವೆ. ಈ ಖಾತೆಗಳನ್ನು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೈಬರ್ ಅಪರಾಧಕ್ಕೆ ಬಳಸಲಾಗಿತ್ತು. ಆರೋಪಿಗಳು ಇದೇ ರೀತಿ ಶ್ರೀನಿವಾಸ್ ಎಂಬುವರಿಗೆ ಚಾರಿಟಬಲ್ ಟ್ರಸ್ಟ್‌ಗೆ ದೇಣಿಗೆ ಕೊಡುವುದಾಗಿ ನಂಬಿಸಿ 93.58 ಲಕ್ಷ ರು. ವಂಚಿಸಿದ್ದರು. ವಂಚಿಸಿದ ಹಣದಲ್ಲಿ 5 ಲಕ್ಷ ರು. ಅನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

ಬಾಕ್ಸ್‌...

ಕಿಂಗ್‌ಪಿನ್‌ಗಳಿಗಾಗಿ ಮುಂದುವರಿದ ಶೋಧ

ಆರೋಪಿಗಳು ಸಂವಹನಕ್ಕಾಗಿ ದುಬೈ ದೇಶದ ಬೋಟಿಮ್‌ ಆ್ಯಪ್ ಹಾಗೂ ಅಕ್ರಮ ಹಣದ ವಹಿವಾಟಿಗೆ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಬಳಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಐಪಿ ಮತ್ತು ಲೊಕೇಶನ್ ವಿಶ್ಲೇಷಣೆಯಿಂದ ಆರೋಪಿಗಳ ಜಾಲ ಕೊಲ್ಕತ್ತಾ, ಹಾಂಗ್‌ಕಾಂಗ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹಾಗೂ ಟೆಲಿಗ್ರಾಂ ಐಡಿಗಳನ್ನು ನಿರ್ವಹಿಸುತ್ತಿದ್ದ ಕಿಂಗ್‌ಪಿನ್‌ಗಳ ಬಂಧನಕ್ಕಾಗಿ ತನಿಖೆ ಮುಂದುವರಿಸಲಾಗಿದೆ.