ಸಾರಾಂಶ
ಮೈಕ್ರೋ ಸಾಫ್ಟ್ ಕಂಪನಿಯ ಸೋಗಿನಲ್ಲಿ ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್ ವಂಚಕರ ಜಾಲವನ್ನು ಬಂಧಿಸಲಾಗಿದೆ. ಸೈಬರ್ ಕಮಾಂಡ್ ಸೆಂಟರ್ ಆರಂಭವಾದ ಮೇಲೆ ಪತ್ತೆ ಹಚ್ಚಿರುವ ಮೊದಲ ಭಾರೀ ಪ್ರಕರಣ ಇದಾಗಿದೆ.
ಬೆಂಗಳೂರು : ಮೈಕ್ರೋ ಸಾಫ್ಟ್ ಕಂಪನಿಯ ಸೋಗಿನಲ್ಲಿ ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್ ವಂಚಕರ ಜಾಲವನ್ನು ಬಂಧಿಸಲಾಗಿದೆ. ಸೈಬರ್ ಕಮಾಂಡ್ ಸೆಂಟರ್ ಆರಂಭವಾದ ಮೇಲೆ ಪತ್ತೆ ಹಚ್ಚಿರುವ ಮೊದಲ ಭಾರೀ ಪ್ರಕರಣ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ವಂದನಾ ಕಲಗುಡಿ ಎಂಬುವರು ನೀಡಿದ ದೂರಿನನ್ವಯ ವೈಟ್‌ಫೀಲ್ಡ್ ‘ಸೆನ್’ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್, ಡಿಜಟಲ್ ಉಪಕರಣ, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕರರಿಗೆ ಸೈಬರ್ ಕ್ರೈಂ ತರಬೇತಿ:
ವೈಟ್‌ಫೀಲ್ಡ್ ಮುಖ್ಯರಸ್ತೆಯ ವರ್ತೂರು, ಕೋಡಿಯಲ್ಲಿರುವ ಡೆಲ್ಟಾ ಬಿಲ್ಡಿಂಗ್‌ನ 6 ನೇ ಮಹಡಿಯಲ್ಲಿ, 4,500 ಚದರ ಅಡಿ ವಿಸ್ತೀರ್ಣವಿರುವ ಮಸ್ಕ್ ಕಮ್ಯುನಿಕೇಷನ್, ಸಿಗ್ಮ ಸಾಫ್ಟ್ ಟೆಕ್ ಪಾರ್ಕ್ ಎಂಬ ಹೆಸರಿನಲ್ಲಿ ನಕಲಿ ಸಾಫ್ಟ್‌ವೇರ್ ಕಂಪನಿಯನ್ನು ಕಳೆದ ಆಗಸ್ಟ್‌ನಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಕಂಪ್ಯೂಟರ್ ಉಪಕರಣಗಳನ್ನು ಇಟ್ಟುಕೊಂಡು ಬೇರೆ ರಾಜ್ಯದ ಜನರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಸೈಬರ್ ಕ್ರೈಂ ಬಗ್ಗೆ ತರಬೇತಿ ನೀಡಿ, ಅಮೆರಿಕಾ ಮತ್ತು ಇತರೆ ದೇಶಗಳ ಪ್ರಜೆಗಳನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ, ಪ್ರತಿಷ್ಠಿತ ಕಂಪನಿಗಳ ಹೆಸರನ್ನು ಹೇಳಿಕೊಂಡು ಅವರ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ಸಾರ್ವಜನಿಕರ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ನಂತರ ಅವರಿಗೆ ನಿಮ್ಮ ವಿರುದ್ಧ ಮನಿಲಾಂಡರಿಂಗ್ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ ನಾವು ಪೊಲೀಸ್‌ನವರು ಎಂದು ಹೇಳಿಕೊಂಡು ನಿಮಗೆ ಸಹಾಯ ಮಾಡುವುದಾಗಿ ನಂಬಿಸಿ ಅವರಿಂದ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಗಾಗಿ ಶೋಧ:
ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದ ಪೊಲೀಸರ ತಂಡ ನ.14 ರಂದು ಮಸ್ಕ್ ಕಮ್ಯುನಿಕೇಷನ್ ಮೇಲೆ ದಾಳಿ ನಡೆಸಿದ್ದಾಗ ಆರೋಪಿಗಳು ಅಮೆರಿಕಾ ಪ್ರಜೆಗಳು ಸೇರಿ ಇತರರನ್ನು ಬೆದರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಕೆಲಸ ಮಾಡುತ್ತಿದ್ದ 21 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಐಟಿ ಕಾಯಿದೆ 2000 ರ ಸೆಕ್ಷನ್ 66,66(ಸಿ) ಮತ್ತು ಬಿಎನ್‌ಎಸ್‌ನ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಕ್ರೋ ಸಾಫ್ಟ್ ಹೆಸರು ದುರ್ಬಳಕೆ
ಆರೋಪಿಗಳು ತಾವು ಮೈಕ್ರೋ ಸಾಫ್ಟ್ ತಾಂತ್ರಿಕ ಬೆಂಬಲ ನೀಡುವ ಸಿಬ್ಬಂದಿ ಎಂದು ಹೇಳಿಕೊಂಡು ಅಮೆರಿಕಾ ಮತ್ತು ಇತರ ದೇಶದ ನಾಗರಿಕರನ್ನು ವಂಚಿಸುತ್ತಿದ್ದರು. ಜತೆಗೆ ಆನ್‌ಲೈನ್ ಮೂಲಕ ಸಂಪರ್ಕಿಸಿ, ಪ್ರತಿಷ್ಠಿತ ಕಂಪನಿಗಳ ಹೆಸರನ್ನು ಹೇಳಿಕೊಂಡು ಅವರ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ಸಾರ್ವಜನಿಕರ ಖಾಸಗಿ ಮಾಹಿತಿಯನ್ನು ಪಡೆದುಕೊಂಡು ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋಟ್ಯಂತರ ರು. ವಂಚನೆ
ಆರೋಪಿಗಳು ಅಮೆರಿಕಾ ಪ್ರಜೆಗಳು ಸೇರಿದಂತೆ ಇತರರಿಗೆ ಫೇಸ್‌ಬುಕ್ ಖಾತೆಗೆ ಎಪಿಕೆ ಫೈಲ್ ಮಾದರಿ ಒಂದು ಲಿಂಕ್ ಕಳುಹಿಸುತ್ತಿದ್ದರು. ಅದನ್ನು ಓಪನ್ ಮಾಡುತ್ತಿದ್ದಂತೆ ಅವರ ಮೊಬೈಲ್ ಅಥವಾ ಕಂಪ್ಯೂಟರ್ ಹ್ಯಾಕ್ ಆಗುತ್ತಿತ್ತು. ಅವರ ಡೇಟಾವನ್ನು ಕದ್ದು ಅವರ ಖಾತೆಯಲ್ಲಿದ್ದ ಹಣವನ್ನು ಎಗರಿಸುತ್ತಿದ್ದರು. ಆರೋಪಿಗಳು ಬಿಟ್‌ಕಾಯಿನ್ ರೂಪದಲ್ಲಿ ಕೋಟ್ಯಂತರ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಡಾ. ಪ್ರಣವ ಮೊಹಂತಿ ಅವರ ಮಾರ್ಗದರ್ಶನದಲ್ಲಿ ಸ್ಪೆಷಲ್ ಸೈಬರ್ ಸೆಲ್ ಎಸ್.ಪಿ ಸವಿತಾ ಶ್ರೀನಿವಾಸ್, ಎಸಿಪಿ ಬಾಲಕೃಷ್ಣ, ವೈಟ್‌ಫೀಲ್ಡ್ ಸೆನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಸುರೇಶ್, ಸಿಬ್ಬಂದಿ ಈರಮ್ಮ, ಅಭಿಜಿತ್ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.
ಸೈಬರ್ ವಂಚನೆಯನ್ನು ತಡೆಗಟ್ಟಲು ಮತ್ತು ಆನ್‌ಲೈನ್ ಅಪರಾಧಗಳಿಂದ ನಾಗರಿಕರನ್ನು ರಕ್ಷಿಸಲು ಸೈಬರ್ ಕಮಾಂಡ್ ಸೆಂಟರ್ ಬದ್ಧವಾಗಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದ ನಕಲಿ ಕಂಪನಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
-ಡಾ.ಪ್ರಣವ್ ಮೊಹಂತಿ, ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ
;Resize=(690,390))

;Resize=(128,128))
;Resize=(128,128))
;Resize=(128,128))