ದರ್ಶನ್ ಗ್ಯಾಂಗ್ ನ ನಾಲ್ವರ ಮನೆಗಳಲ್ಲಿ ದಿನವಿಡೀ ಮಹಜರ್

| Published : Jun 17 2024, 07:40 AM IST

Darshan Thoogudeepa-Pavithra Gowda Relationship
ದರ್ಶನ್ ಗ್ಯಾಂಗ್ ನ ನಾಲ್ವರ ಮನೆಗಳಲ್ಲಿ ದಿನವಿಡೀ ಮಹಜರ್
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ಗ್ಯಾಂಗ್ ನಾಲ್ವರು ಆರೋಪಿಗಳ ಸ್ಥಳ ಮಹಜರು ಭಾನುವಾರ ಚಿತ್ರದುರ್ಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಿತು.

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ಗ್ಯಾಂಗ್ ನಾಲ್ವರು ಆರೋಪಿಗಳ ಸ್ಥಳ ಮಹಜರು ಭಾನುವಾರ ಚಿತ್ರದುರ್ಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಿತು.

ಚಿತ್ರದುರ್ಗದ ನಾಲ್ವರು ಆರೋಪಿಗಳನ್ನು ಶನಿವಾರ ರಾತ್ರಿಯೇ ಕರೆ ತಂದಿರುವ ಪೊಲೀಸರು ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಹಾಗಾಗಿ ಆರೋಪಿಗಳ ನೋಡಲು ಹೋಟೆಲ್ ಮುಂಭಾಗ ಜನ ಜಮಾಯಿಸಿದ್ದರು. ಹತ್ತು ಗಂಟೆ ನಂತರ ಆರೋಪಿಗಳನ್ನು ಸ್ಥಳ ಮಹಜರ್ ಗೆ ಕರೆದೊಯ್ಯಲಾಯಿತು.

ರೇಣುಕಾಸ್ವಾಮಿ ಚಿತ್ರದುರ್ಗದಿಂದ ಕುಂಚಿಗನಹಾಳು ಕಣಿವೆ ವರೆಗೆ ಹಾಗೂ ಅಲ್ಲಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಆಟೋ ಮತ್ತು ಕಾರನ್ನು ಪೊಲೀಸರು ಸೀಜ್ ಮಾಡಿದರು. ನಟ ದರ್ಶನ್ ಗ್ಯಾಂಗ್‌ನ ಎ8 ಆರೋಪಿ, ಕಾರು ಚಾಲಕ ರವಿಶಂಕರ್ ನ ಐನಹಳ್ಳಿ ಕುರುಬರಹಟ್ಟಿ ಗ್ರಾಮಕ್ಕೆ ತೆರಳಿದ ಗೋವಿಂದರಾಜ ನಗರ ಸಿಪಿಐ ಸುಬ್ರಹ್ಮಣ್ಯ ನೇತೃತ್ವದ ತಂಡ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು. ದರ್ಶನ್ ಮತ್ತು ಗ್ಯಾಂಗ್ ನಿಂದ ಐದು ಲಕ್ಷ ಪಡೆದ ಮಾಹಿತಿ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಸಲಾಯಿತು. ಬೆರಳಚ್ಚು ತಜ್ಞರು ಈ ವೇಳೆ ಹಾಜರಿದ್ದು ರೇಣುಕಾಸ್ವಾಮಿ ಕಿಡ್ನಾಪ್ ಗೆ ಬಳಸಲಾದ ಕಾರು ಪರಿಶೀಲಿಸಿದರು. ರವಿಶಂಕರ್ ಗೆ ಸೇರಿದ ಇಟಿಯೋಸ್‌ ಕಾರನ್ನು ಪೋಲೀಸರು ಜಪ್ತಿ ಮಾಡಿದರು.

ಇದೇ ವೇಳೆ ಪ್ರಕರಣದ ಎ4 ಆರೋಪಿ ರಾಘವೇಂದ್ರನ ಮೆದೆಹಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿದ ಪೊಲೀಸರು ಮನೆ ತಲಾಶ್ ಮಾಡಿದರು. ಈ ವೇಳೆ ನಾಲ್ಕು ಲಕ್ಷ ರುಪಾಯಿ ನಗದು ಸಿಕ್ಕಿದೆ ಎನ್ನಲಾಗಿದ್ದು, ಇದಲ್ಲದೆ ಬೆಳ್ಳಿಯ ಚೈನ್ ಸಿಕ್ಕಿದ್ದು ಅದರ ಮೇಲೆ ಆರ್ ಎಸ್ ಎಂಬ ಸಿಂಬಲ್ ಇದೆ. ಇದು ರೇಣುಕ ಸ್ವಾಮಿಯದೋ ಅಥವಾ ರಾಘವೇಂದ್ರನದೋ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿದೆ. ಪ್ರತಿಯೊಬ್ಬರ ನಿವಾಸದಲ್ಲಿಯೇ ಕೊಲೆ ಮಾಡುವ ವೇಳೆ ತೊಟ್ಟಿದ್ದ ಬಟ್ಟೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಜಗ್ಗನ ಮನೆಗೆ ತೆರಳಿ ಆಟೋ ಸೀಜ್ ಮಾಡಲಾಯಿತು.

 ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿ 

ಪ್ರಕರಣದ ಎ7 ಆರೋಪಿ ಅನುಕುಮಾರ್ ಅವರ ತಂದೆ ಚಂದ್ರಣ್ಣ ತಮ್ಮ ಮಗನ ಬಂಧನದ ಸುದ್ದಿ ತಿಳಿದು ಹೃದಾಯಾಘಾತದಿಂದ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತ್ರಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಪುತ್ರ ಇಲ್ಲದೆ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಅನು ಕರೆತಂದ ಪೊಲೀಸರು ವಿಧಿ-ವಿಧಾನ ನಡೆಸಲು ಅವಕಾಶ ಮಾಡಿಕೊಟ್ಟರು. ನಂತರ ತಮ್ಮ ಜತೆಗೆ ಆತನನ್ನು ಕರೆದೊಯ್ದರು. ಭಾನುವಾರ ಈತನ ಮನೆಗೂ ಹೋಗಿ ಸ್ಥಳ ಮಹಜರು ನಡೆಸಲಾಯಿತು.