ದರ್ಶನ್‌ ಪೊಲೀಸ್‌ ಕಸ್ಟಡಿ ಅಂತ್ಯ - ಕಿಲ್ಲಿಂಗ್‌ ಸ್ಟಾರ್‌ ಈಗ ಕೈದಿ ನಂಬರ್‌ 6109!

| Published : Jun 23 2024, 02:10 AM IST / Updated: Jun 23 2024, 04:39 AM IST

Darshan
ದರ್ಶನ್‌ ಪೊಲೀಸ್‌ ಕಸ್ಟಡಿ ಅಂತ್ಯ - ಕಿಲ್ಲಿಂಗ್‌ ಸ್ಟಾರ್‌ ಈಗ ಕೈದಿ ನಂಬರ್‌ 6109!
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಹನ್ನೆರಡು ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ಕನ್ನಡ ಚಲನಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ತೂಗುದೀಪ ಹಾಗೂ ಅವರ ನಾಲ್ವರು ಆಪ್ತರು ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.  

 ಬೆಂಗಳೂರು  : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಹನ್ನೆರಡು ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ಕನ್ನಡ ಚಲನಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ತೂಗುದೀಪ ಹಾಗೂ ಅವರ ನಾಲ್ವರು ಆಪ್ತರು ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಈಗ ದರ್ಶನ್‌ ವಿಚಾರಣಾಧೀನ ಕೈದಿ ನಂಬರ್‌ 6109 ಆಗಿದ್ದಾರೆ.

ಹದಿಮೂರು ವರ್ಷಗಳ ಹಿಂದೆ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತು 52 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ಸೆರೆಮನೆ ವಾಸ ಅನುಭವಿಸಿದ್ದ ದರ್ಶನ್‌ ಈಗ 2ನೇ ಬಾರಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ.

ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್, ಅವರ ಆಪ್ತರಾದ ವಿನಯ್‌, ಪ್ರದೂಷ್ ಹಾಗೂ ಧನರಾಜ್ ಅಲಿಯಾಸ್ ರಾಜನನ್ನು ಶನಿವಾರ ಮಧ್ಯಾಹ್ನ ಪೊಲೀಸರು ಹಾಜರುಪಡಿಸಿದರು.  ಪ್ರಭಾವಿಗಳಾಗಿದ್ದಾರೆ. ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು ಎಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನಕುಮಾರ್ ವಾದಿಸಿದರು. ಬಳಿಕ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯವು ಆದೇಶಿಸಿತು. ಅಂತೆಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಂಜೆ 5.30ರ ಸುಮಾರಿಗೆ ದರ್ಶನ್‌ ಹಾಗೂ ಅವರ ಸಹಚರರನ್ನು ಬಿಗಿ ಬಂದೋಬಸ್ತ್‌ನಲ್ಲಿ ಕರೆದೊಯ್ದು ಪೊಲೀಸರು ಬಿಟ್ಟರು. ಎರಡು ದಿನಗಳ ಹಿಂದೆ ಇದೇ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಪ್ರಿಯತಮೆ ಪವಿತ್ರಾಗೌಡ ಹಾಗೂ ಅವರ 13 ಮಂದಿ ಸಹಚರರು ಜೈಲು ಸೇರಿದ್ದರು.

ಏನಿದು ಪ್ರಕರಣ?:

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯತಮೆ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆತಂದು ಬಳಿಕ ಆತನಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆಗೈದ ಆರೋಪದ ಮೇರೆಗೆ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮೂರು ಬಾರಿ ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ದರ್ಶನ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹತ್ಯೆ ಕೃತ್ಯದಲ್ಲಿ ತಪ್ಪಿಸಿಕೊಳ್ಳಲು 70 ಲಕ್ಷ ರು. ವ್ಯಯಿಸಲು ದರ್ಶನ್ ಯತ್ನಿಸಿದ್ದರು. ಕೊನೆಗೆ 12 ದಿನಗಳ ತನಿಖೆ ನಡೆಸಿದ ಬಳಿಕ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಶನಿವಾರ ಪೊಲೀಸರು ಹಾಜರುಪಡಿಸಿದರು. ಬಳಿಕ ಅವರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿತು.

ವಿಶೇಷ ಭದ್ರತಾ ವಿಭಾಗದಲ್ಲಿ ದಚ್ಚು:

ಕೊಲೆ ಆರೋಪ ಹೊತ್ತು ಜೈಲಿಗೆ ಬಂದ ದರ್ಶನ್‌ಗೆ ವೈದ್ಯಕೀಯ ತಪಾಸಣೆ ಬಳಿಕ ವಿಶೇಷ ಭದ್ರತಾ ವಿಭಾಗದ ಸೆಲ್‌ ಅನ್ನು ಕಾರಾಗೃಹದ ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ಅವರ ನಾಲ್ವರು ಸಹಚರರಿಗೆ ವಿಚಾರಣಾಧೀನ ಕೈದಿ ನಂಬರ್‌ಗಳನ್ನು ಸಹ ಅಧಿಕಾರಿಗಳು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.