ಸಾಕ್ಷ್ಯ ನಾಶಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ಸರ್ಕಸ್‌ । ಶೆಡ್‌ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ!

| Published : Jun 21 2024, 01:05 AM IST / Updated: Jun 21 2024, 04:55 AM IST

ಸಾಕ್ಷ್ಯ ನಾಶಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ಸರ್ಕಸ್‌ । ಶೆಡ್‌ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ!
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯದಿಂದ ಬಚಾವಾಗಲು ನಟ ದರ್ಶನ್‌ ತೂಗುದೀಪ ನಡೆಸಿದ ಮತ್ತು ಅವರ ಹಿಂಬಾಲಕರು ಈಗಲೂ ಅಂಥದ್ದೇ ಯತ್ನ ನಡೆಸುತ್ತಿರುವ ಆತಂಕಕಾರಿ ವಿಷಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯದಿಂದ ಬಚಾವಾಗಲು ನಟ ದರ್ಶನ್‌ ತೂಗುದೀಪ ನಡೆಸಿದ ಮತ್ತು ಅವರ ಹಿಂಬಾಲಕರು ಈಗಲೂ ಅಂಥದ್ದೇ ಯತ್ನ ನಡೆಸುತ್ತಿರುವ ಆತಂಕಕಾರಿ ವಿಷಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. 

ಒಂದೆಡೆ ಹತ್ಯೆ ಕೇಸಲ್ಲಿ ಸಾಕ್ಷ್ಯ ನುಡಿಯದಂತೆ ಶೆಡ್‌ನ ಕಾವಲುಗಾರರಿಗೆ ಡಿ ಗ್ಯಾಂಗ್‌ನ ಆಪ್ತರು ಭಾರೀ ಹಣದ ಆಮಿಷ ಒಡ್ಡುತ್ತಿದ್ದರೆ, ಮತ್ತೊಂದೆಡೆ ಪ್ರಕರಣದಲ್ಲಿ ತಾವು ಬಚಾವ್‌ ಆಗಲು ನಟ ದರ್ಶನ್‌ ಸಂಗ್ರಹಿಸಿದ್ದ 40 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ‘ಹತ್ಯೆ ಘಟನೆ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್‌ನ ಕಾವಲುಗಾರರಿಗೆ ಪೊಲೀಸರ ಮುಂದೆ ಸಾಕ್ಷ್ಯ ನುಡಿಯದಂತೆ ದರ್ಶನ್ ಗ್ಯಾಂಗ್ ಪರವಾಗಿ ಕೆಲವರು ಹಣದಾಸೆ ತೋರಿಸಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ. 

ಆದರೆ ನಿರ್ದಿಷ್ಟವಾಗಿ ಯಾರಿಂದ ಹಣದ ಆಮಿಷ ಬಂದಿದೆ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.

ಬಚಾವಾಗಲು 40 ಲಕ್ಷ ರು. ಸಂಗ್ರಹ: ಈ ನಡುವೆ ಪ್ರಕರಣದಿಂದ ಬಚಾವ್‌ ಆಗಲು ದರ್ಶನ್‌ ತಮ್ಮ ಮನೆಯಲ್ಲಿ 40 ಲಕ್ಷ ರು. ಸಂಗ್ರಹಿಸಿ ಇಟ್ಟಿದ್ದ ವಿಷಯವೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿಗೆ ಪೊಲೀಸ್ ಕಸ್ಟಡಿಗೆ ಪಡೆದು ದರ್ಶನ್‌ ಅವರನ್ನು ವಿಚಾರಣೆಗೊಳಪಡಿಸಿದಾಗ 40 ಲಕ್ಷ ರು. ಹಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆನಂತರ ಆರ್‌.ಆರ್‌.ನಗರದ ಐಡಿಯಲ್‌ ಹೋಮ್‌ ಲೇಔಟ್‌ನಲ್ಲಿರುವ ದರ್ಶನ್ ಮನೆಯಲ್ಲಿ ಪಿಂಕ್ ಬ್ಯಾಗ್‌ನಲ್ಲಿದ್ದ 37.40 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಹಣವನ್ನು ಆರ್‌.ಆರ್‌.ನಗರದಲ್ಲಿರುವ ಅವರ ಮನೆ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಬಳಿಯಿಂದ ಜಪ್ತಿ ಮಾಡಲಾಗಿದೆ.

ಈ ಮೊದಲು ಪ್ರಕರಣದಲ್ಲಿ ತಮ್ಮ ಹೆಸರು ಹೇಳದೆ ಶರಣಾಗತಿಯಾಗುವ ನಾಲ್ವರಿಗೆ ನೀಡುವಂತೆ ತಮ್ಮ ಆಪ್ತ ಪ್ರದೂಷ್‌ಗೆ ದರ್ಶನ್ ಕೊಟ್ಟಿದ್ದ 30 ಲಕ್ಷ ರು. ಜಪ್ತಿಯಾಗಿತ್ತು. ಅದರ ಬಳಿಕ ಮತ್ತೆ 40 ಲಕ್ಷ ರು. ಜಪ್ತಿಯೊಂದಿಗೆ ಪ್ರಕರಣದಲ್ಲಿ ದರ್ಶನ್‌ಗೆ ಸೇರಿದ ಒಟ್ಟು 70 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿದಂತೆ ಆಗಿದೆ. ಈ ದೊಡ್ಡ ಮೊತ್ತದ ಹಣವು ಕೊಲೆ ಕೃತ್ಯದಿಂದ ದರ್ಶನ್ ತಪ್ಪಿಸಿಕೊಳ್ಳಲು ನಡೆಸಿದ ಪ್ರಯತ್ನಕ್ಕೆ ಪ್ರಮುಖ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

40 ರು. ಲಕ್ಷ ಯಾರದ್ದು?: 

ಬಚಾವ್‌ ಯತ್ನದ ಭಾಗವಾಗಿ ದರ್ಶನ್‌ ತಮ್ಮ ಪರಿಚಿತರಿಂದ ಕ್ಷಣಾರ್ಧದಲ್ಲಿ 40 ಲಕ್ಷ ರು. ಹಣ ಹೊಂದಿಸಿದ್ದಾರೆ. ಹತ್ಯೆ ನಡೆದ ದಿನ ತಮ್ಮ ಸ್ನೇಹಿತ ಮೋಹನ್ ರಾಜ್‌ ಎಂಬುವರಿಂದ 40 ಲಕ್ಷ ರು. ಹಣವನ್ನು ದರ್ಶನ್ ಪಡೆದಿದ್ದರು ಎನ್ನಲಾಗಿದೆ.

40 ಲಕ್ಷ ರು. ಕೊಟ್ಟಿದ್ದು ಬಿಜೆಪಿ ಮುಖಂಡ?

ದರ್ಶನ್‌ಗೆ 40 ಲಕ್ಷ ರು. ಹಣವನ್ನು ಕೊಟ್ಟಿರುವ ಮೋಹನ್‌ ರಾಜ್‌ ಅವರು ಬಿಜೆಪಿ ಮುಖಂಡರಾಗಿದ್ದು, ಬೆಂಗಳೂರಿನ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಆಪ್ತರಾಗಿದ್ದಾರೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಶಾಸಕರ ಪರ ದರ್ಶನ್ ಪ್ರಚಾರ ಕೂಡ ನಡೆಸಿದ್ದರು ಎಂದು ತಿಳಿದು ಬಂದಿದೆ.

ಅಭಿಮಾನಿ ಬಳಗ ಬಳಸಿ ತನಿಖೆಗೆ ಅಡ್ಡಿರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ನಟ ದರ್ಶನ್‌ ಭಾಗಿಯಾಗಿರುವುದು ಮಾತ್ರವಲ್ಲದೆ, ತನ್ನ ಹಣ ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯದ ಗಮನಕ್ಕೆತಂದಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್‌ ಈ ನೆಲದ ಕಾನೂನು ದುರುಪಯೋಗಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ತಮ್ಮ ಅಭಿಮಾನಿ ಬಳಗವನ್ನು ಬಳಸಿಕೊಂಡು ಅವರ ಮುಖಾಂತರ ಪ್ರಕರಣದ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.