ಸಾರಾಂಶ
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆರೋಪಿಸಿ ನಟ ಪ್ರಥಮ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಗರಬಾವಿ ಇನ್‌ಜಿಇಎಫ್ ಲೇಔಟ್ ನಿವಾಸಿ ಚಿತ್ರ ನಟ ಪ್ರಥಮ್ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏನಿದು ದೂರು?:
ಈ ಹಿಂದೆ ತಮಗೆ ತೇಜೋವಧೆ ಮತ್ತು ಬೆದರಿಕೆ ಸಂದೇಶ ಬರುತ್ತಿರುವ ಬಗ್ಗೆ ದೂರು ನೀಡಿದ್ದೇನೆ. ಆದರೂ ಕೂಡ ನಿರಂತರವಾಗಿ ತಮ್ಮ ಮೊಬೈಲ್‌ಗೆ ಇನ್‌ಸ್ಟಾಗ್ರಾಮ್ ಕರೆಗಳು ಬರುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಂತೆಯೇ ಕೆಲವು ಅಂಧಾಭಿಮಾನಿಗಳು ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಾಯಿ, ಮಡದಿ ಬಗ್ಗೆ ಮಾನ ಹಾಗೂ ಗೌರವಕ್ಕೆ ಕುಂದುಂಟು ಮಾಡುವ ರೀತಿಯಲ್ಲಿ ಅಶ್ಲೀಲ ಪದಗಳಿಂದ ಸಂದೇಶ ಕಳುಹಿಸುವುದು ಹಾಗೂ ಕಾಮೆಂಟ್ ಮಾಡುತ್ತಿದ್ದಾರೆ.
ಯುಟ್ಯೂಬ್ ಚಾನೆಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಹಾಗೂ ತನ್ನ ಕುಟುಂಬಕ್ಕೆ ತೊಂದರೆ ನೀಡುತ್ತಿರುವ ಹಾಗೂ ಜೀವ ಬೆದರಿಕೆ ಹಾಕುತ್ತಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.