ಡಿಕೆಸು ತಂಗಿ ಎಂದು ನಂಬಿಸಿ ₹8 ಕೋಟಿ ಧೋಖಾ

| Published : Dec 25 2024, 01:33 AM IST

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ತಂಗಿ ಎಂದು ಚಿನ್ನದಂಗಡಿ ಮಾಲೀಕರಿಗೆ ನಂಬಿಸಿ ಬರೋಬ್ಬರಿ 8.41 ಕೋಟಿ ರು. ಮೌಲ್ಯದ 14.6 ಕೆಜಿ ಚಿನ್ನಾಭರಣ ಸಾಲ ಪಡೆದು ಬಳಿಕ ಹಣ ನೀಡಿದೆ ವಂಚಿಸಿದ ಆರೋಪದಡಿ ಮಹಿಳೆ, ಚಿತ್ರನಟ ಸೇರಿ ಮೂವರ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ತಂಗಿ ಎಂದು ಚಿನ್ನದಂಗಡಿ ಮಾಲೀಕರಿಗೆ ನಂಬಿಸಿ ಬರೋಬ್ಬರಿ 8.41 ಕೋಟಿ ರು. ಮೌಲ್ಯದ 14.6 ಕೆಜಿ ಚಿನ್ನಾಭರಣ ಸಾಲ ಪಡೆದು ಬಳಿಕ ಹಣ ನೀಡಿದೆ ವಂಚಿಸಿದ ಆರೋಪದಡಿ ಮಹಿಳೆ, ಚಿತ್ರನಟ ಸೇರಿ ಮೂವರ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರಾಹಿ ವರ್ಲ್ಡ್ ಆಫ್‌ ಗೋಲ್ಡ್‌ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್‌.ಐತಾಳ್‌ ನೀಡಿದ ದೂರಿನ ಮೇರೆಗೆ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ), ಈಕೆಯ ಪತಿ ಹರೀಶ್‌, ಚಿತ್ರನಟ ಧರ್ಮೇದ್ರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?

ದೂರುದಾರೆ ವನಿತಾ ಎಸ್‌.ಐತಾಳ್‌ ನೀಡಿದ ದೂರಿನ ಅನ್ವಯ, ನಾನು ವರಾಹೀ ವರ್ಲ್ಡ್‌ ಆಫ್‌ ಗೋಲ್ಡ್‌ ಚಿನ್ನದಂಗಡಿ ಮಾಲೀಕಳಾಗಿದ್ದೇನೆ. ಆರ್‌.ಆರ್‌.ನಗರ ನಿವಾಸಿಗಳಾದ ಬಂಗಾರಿ ಗೌಡ ಮತ್ತು ಆಕೆಯ ಪತಿ ಹರೀಶ್‌ ಪರಿಚಿತರು. ಬಂಗಾರಿ ಗೌಡ ಅವರು ಸಂಸದ ಡಿ.ಕೆ.ಸುರೇಶ್‌ ಅವರ ತಂಗಿ ಎಂದು ನನಗೆ ನಂಬಿಸಿದ್ದರು. ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ವ್ಯಾಪಾರಸ್ತೆ. ಮುಂದೆ ನಿಮಗೆ ಒಳ್ಳೇಯ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದು ಸ್ನೇಹ ಸಂಪಾದಿಸಿದ್ದರು. ನನ್ನ ಚಿನ್ನದಂಗಡಿಯಲ್ಲಿ ಹಲವು ಬಾರಿ ಚಿನ್ನಾಭರಣಗಳನ್ನು ಸಾಲ ಪಡೆದು ಕೆಲ ದಿನಗಳ ಬಳಿಕ ಹಣವನ್ನು ನೀಡಿದ್ದಾರೆ. ಇದನ್ನು ನಂಬಿ ನಾನು ಅವರು ಕೇಳಿದಾಗಲೆಲ್ಲಾ ಚಿನ್ನಾಭರಣ ಸಾಲ ನೀಡುತ್ತಾ ಬಂದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಣ ನೀಡಲು ಒಪ್ಪಂದ:ನಮಗೆ ಕೊಡಬೇಕಾದ ಹಣ ಕೇಳಿದಾಗ 2024ರ ಏಪ್ರಿಲ್ ಅಂತ್ಯಕ್ಕೆ ನೀಡುವುದಾಗಿ ಹೇಳಿದ್ದರು. ಅದರಂತೆ ಏ.29ರಂದು ಹಣ ಕೇಳಿದಾಗ ಬಂಗಾರಿ ಗೌಡ ಅವರು ಈಗ ನನ್ನ ಬಳಿ ಹಣವಿಲ್ಲ ಎಂದರು. ಆಗ ನೀವು ಪಡೆದಿರುವ 14.6 ಕೆಜಿ ಚಿನ್ನಾಭರಣಕ್ಕೆ ಈ ದಿನದ ದರ ₹9.82 ಕೋಟಿ ಆಗುತ್ತದೆ. ನಿಮ್ಮಿಂದ ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ರೂಪವಾಗಿ ₹10 ಕೋಟಿ ನೀಡಬೇಕು. ಈ ಸಂಬಂಧ ಎಂಒಯು (ಒಪ್ಪಂದ) ಮಾಡಿಕೊಡುವಂತೆ ಕೇಳಿದೆ. ಅದಕ್ಕೆ ಬಂಗಾರಿ ಗೌಡ ದಂಪತಿ 2024ರ ಜು.30ರ ವರೆಗೆ ಸಮಯಾವಕಾಶ ಕೇಳಿದರು. ಬಳಿಕ ಅವರು ಕೊಡಬೇಕಾದ ಹಣಕ್ಕೆ ಎಂಒಯು ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಡಿ.ಕೆ.ಸುರೇಶ್‌ ಹೆಸರಿನಲ್ಲಿ ನಟನಿಂದ ಕರೆ:ನಂತರ ನಾನು ಹಣ ನೀಡುವಂತೆ ಬಂಗಾರಿ ಗೌಡ ಅವರನ್ನು ಕೇಳಿದಾಗ, ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದರು. ಇದನ್ನು ನಾವು ನಂಬಿದ್ದೆವು. ನಂತರದ ದಿನದಲ್ಲಿ ವಿಚಾರಿಸಿದಾಗ ಬಂಗಾರಿ ಗೌಡ ಅವರು ಡಿ.ಕೆ.ಸುರೇಶ್‌ ಅವರ ಹೆಸರಿನಲ್ಲಿ ಚಿತ್ರನಟ ಧರ್ಮೇಂದ್ರ ಅವರಿಂದ ನಮಗೆ ಕರೆ ಮಾಡಿಸಿರುವುದು ತಿಳಿಯಿತು. ಈ ವಿಚಾರ ನಮಗೆ ಗೊತ್ತಾದ ಬಳಿಕ ಬಂಗಾರಿ ಗೌಡ ಅವರು, ನೀನು ನನಗೆ ಪದೇ ಪದೇ ಕರೆ ಮಾಡಿದರೆ ಸರಿ ಇರುವುದಿಲ್ಲ. ನಿನ್ನನ್ನು ಏನು ಬೇಕಾದರೂ ಮಾಡುತ್ತೇವೆ. ನಿನ್ನ ಅಂಗಡಿಗೆ ಧರ್ಮೇಂದ್ರನನ್ನು ಕಳುಹಿಸಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಧರ್ಮೇಂದ್ರನನ್ನು ನನ್ನ ಅಂಗಡಿಗೆ ಕಳುಹಿಸಿ ಪ್ರಾಣ ಬೆದರಿಕೆ ಹಾಕಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ನಾವು ಬಂಗಾರಿ ಗೌಡಗೆ ನೀಡಿರುವ 14.6 ಕೆಜಿ ಚಿನ್ನಾಭರಣಗಳನ್ನು ಮುಂಬೈ ಹಾಗೂ ಬೆಂಗಳೂರು ವ್ಯಾಪಾರಿಗಳಿಂದ ಸಾಲ ಪಡೆದು ನೀಡಿದ್ದೇವೆ. ಈ ವ್ಯಾಪಾರಿಗಳಿಗೆ ಇನ್ನೂ ನಾವು ಹಣ ಕೊಟ್ಟಿಲ್ಲ. ಇದರಿಂದ ಅವರಿಗೆ ನಾವು ನೀಡಿರುವ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿ ಬೌನ್ಸ್‌ ಮಾಡಿ ನಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಮಗೆ ದೈನಂದಿನ ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿದೆ.

ನಮ್ಮ ಬಳಿ ಚಿನ್ನಾಭರಣ ಪಡೆದಿರುವ ಬಂಗಾರಿ ಗೌಡ ದಂಪತಿ ಹಾಗೂ ಚಿತ್ರನಟ ಧರ್ಮೇಂದ್ರ ಈವರೆಗೂ ನಮಗೆ ಹಣ ಅಥವಾ ಚಿನ್ನಾಭರಣ ವಾಪಾಸ್‌ ನೀಡಿದೆ ನಂಬಿಕೆ ದ್ರೋಹ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕ್ರಮ ಕೈಗೊಳ್ಳುವಂತೆ ವನಿತಾ ಎಸ್‌.ಐತಾಳ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸಾಲವಾಗಿ 14 ಕೇಜಿ ಚಿನ್ನಾಭರಣ ಪಡೆದರು:

ಬಂಗಾರಿ ಗೌಡ ಮತ್ತು ಆಕೆಯ ಪತಿ ಹರೀಶ್‌ 2023ರ ಅ.12ರಿಂದ 2024ರ ಜ.1ರವರೆಗೆ ಹಂತ ಹಂತವಾಗಿ 14.6 ಕೆಜಿ ಚಿನ್ನಾಭರಣಗಳನ್ನು ಸಾಲ ಪಡೆದಿದ್ದಾರೆ. ಕೆಲವು ಬಾರಿ ಬಂಗಾರಿ ಗೌಡ, ಅವರ ಪತಿ ಹರೀಶ್‌, ಅವರ ಮ್ಯಾನೇಜರ್‌ ಹರ್ಷವರ್ಧನ್‌, ನವೀನ್‌, ಬೌನ್ಸರ್‌ ಗಜ ಹಾಗೂ ಡ್ರೈವರ್‌ ಮಹೇಶ್‌ ಅವರು ಅಂಗಡಿಗೆ ಬಂದು ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾರೆ. ಕೆಲ ಬಾರಿ ಬಂಗಾರಿ ಗೌಡ ಅವರ ಆರ್ಡರ್‌ ಮೇರೆಗೆ ನಾನು ನಮ್ಮ ಕಡೆಯವರಾದ ಸುಹಾಸ್‌, ಅಭಿಜಿತ್‌ ಗೌಡ, ಪ್ರಮೋದ್‌ ಹಾಗೂ ಅಭಿನವ್‌ ಮಂಜುನಾಥ ಅವರ ಮೂಲಕ ಚಿನ್ನಾಭರಣ ಕಳುಹಿಸಿಕೊಟ್ಟಿದ್ದೇನೆ. ಒಟ್ಟಾರೆ ಬಂಗಾರಿ ಗೌಡ ಅವರು ₹8.41 ಕೋಟಿ ಮೌಲ್ಯದ ₹14.6 ಕೇಜಿ ಚಿನ್ನಾಭರಣ ಸಾಲ ಪಡೆದಿದ್ದಾರೆ. ಆದರೆ, ಈವರೆಗೂ ಹಣ ಪಾವತಿಸಿಲ್ಲ.