ಸಾರಾಂಶ
ಬೆಂಗಳೂರು : ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ನೈಲ್ ಆರ್ಟಿಸ್ಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.26 ಮಂಗಳವಾರದಂದು ಬಾಗಲಗುಂಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಸೋನಿಯಾ(24) ಆತ್ಮಹತ್ಯೆ ಮಾಡಿಕೊಂಡವರು.
ದೆಹಲಿ ಮೂಲದ ಸೋನಿಯಾ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದು, ಸ್ಪಾವೊಂದರಲ್ಲಿ ನೈಲ್ ಆರ್ಟಿಸ್ಟ್ ಕೆಲಸ ಮಾಡುತ್ತಿದ್ದರು. ಬಾಗಲಗುಂಟೆಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಮಂಗಳವಾರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಪಾಗೆ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸ್ಪಾ ಮಾಲೀಕರು ಸೋನಿಯಾ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಸ್ಪಾ ಸಿಬ್ಬಂದಿ ಮನೆ ಬಳಿ ಬಂದು ನೋಡಿದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ. ಬಳಿಕ ಬಾಗಿಲು ಲಾಕ್ ಮುರಿದು ಒಳಗೆ ಹೋಗಿ ನೋಡಿದಾಗ ಸೋನಿಯಾ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೋನಿಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ದೆಹಲಿಯಲ್ಲಿರುವ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.