ಸಾರಾಂಶ
ಗೋವುಗಳನ್ನು ಆರಾಧಿಸುಚ ಸಂಕ್ರಾಂತಿಗೂ ಮುನ್ನ ಬೆಂಗಳೂರಿನಲ್ಲಿ ಪೈಚಾಚಿಕ ಘಟನೆಯೊಂದು ನಡೆದಿದ್ದು, ನಗರದ ಮನೆಯೊಂದರ ಶೆಡ್‌ನಲ್ಲಿ ಕಟ್ಟಿಹಾಕಿದ್ದ 3 ಸೀಮೆ ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು, ಕ್ರೂರತೆ ಮೆರೆದ ಘಟನೆ ನಡೆದಿದೆ.
ಬೆಂಗಳೂರು : ಗೋವುಗಳನ್ನು ಆರಾಧಿಸುವ ಸಂಕ್ರಾಂತಿಗೂ ಮುನ್ನ ಬೆಂಗಳೂರಿನಲ್ಲಿ ಪೈಶಾಚಿಕ ಘಟನೆಯೊಂದು ನಡೆದಿದ್ದು, ನಗರದ ಮನೆಯೊಂದರ ಶೆಡ್‌ನಲ್ಲಿ ಕಟ್ಟಿಹಾಕಿದ್ದ 3 ಸೀಮೆ ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು, ಕ್ರೂರತೆ ಮೆರೆದ ಘಟನೆ ನಡೆದಿದೆ. ಈ ಅಮಾನುಷ ಕೃತ್ಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನಗರದ ಹೃದಯಭಾಗ ಆಗಿರುವ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ಶನಿವಾರ ತಡರಾತ್ರಿ ಈ ದುಷ್ಕೃತ್ಯ ನಡೆದಿದೆ. ಈ ಹೀನ ಕೃತ್ಯದ ವಿರುದ್ಧ ಹಸುಗಳ ಮಾಲೀಕ ಕರ್ಣ ಎಂಬುವವರು ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ವಿನಾಯಕನಗರ ನಿವಾಸಿ ಕರ್ಣ ಹಲವು ವರ್ಷಗಳಿಂದ 8 ಸೀಮೆ ಹಸುಗಳನ್ನು ಸಾಕಿಕೊಂಡು ಹಾಲು ವ್ಯಾಪಾರದಲ್ಲಿ ತೊಡಗಿದ್ದಾರೆ. ಶನಿವಾರ ಸಂಜೆ ಹಾಲು ಕರೆದು 3 ಹಸುಗಳನ್ನು ಎಂದಿನಂತೆ ಮನೆ ಬಳಿಯ ಶೆಡ್‌ನಲ್ಲಿ ಕಟ್ಟಿದ್ದಾರೆ. ಆದರೆ ತಡರಾತ್ರಿ ದುಷ್ಕರ್ಮಿಗಳು ಶೆಡ್ ಬಳಿ ಬಂದು ಮಾರಕಾಸ್ತ್ರಗಳಿಂದ ಮೂರು ಹಸುಗಳ ಕೆಚ್ಚಲು ಕೊಯ್ದು, ಬಳಿಕ ಕಾಲುಗಳಿಗೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.
ಭಾನುವಾರ ಮುಂಜಾನೆ ಸುಮಾರು 4.45ರ ಸುಮಾರಿಗೆ ಪಕ್ಕದ ಮನೆಯವರು ಹಸ್ತುಗಳ ಕೆಚ್ಚಲಿನಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿ ಮಾಲೀಕ ಕರ್ಣನಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕರ್ಣ ಶೆಡ್‌ಗೆ ತೆರಳಿ ನೋಡಿದಾಗ ಮೂರು ಹಸುಗಳ ಕೆಚ್ಚಲು ಗಾಯಗೊಂಡಿದ್ದು, ರಕ್ತ ಸೋರುತ್ತಿರುವುದು ಕಂಡು ಬಂದಿದೆ. ಬಳಿಕ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತರುವಾಯ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿಭಟನೆ, ಪ್ರಕ್ಷುಬ್ಧ ವಾತಾವರಣ ನಿರ್ಮಾಣ:
ದುರುಳರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ವಿಚಾರ ಬೆಳಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಘಟನಾ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ನಡೆಸಿದರು. ಈ ಹೀನ ಕೃತ್ಯ ಎಸೆಗಿದ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಂಸದ ಪಿ.ಸಿ.ಮೋಹನ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನೆರೆಹೊರೆಯ ಜನರೂ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೀಗಾಗಿ ವಿನಾಯಕ ನಗರದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಚಾಮರಾಜಪೇಟೆ ಶಾಸಕರೂ ಆದ ಸಚಿವ ಜಮೀರ್ ಅಹ್ಮದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ, ಕ್ರೂರಿಗಳಿಗೆ ತಕ್ಕ ಶಿಕ್ಷೆ ಕೊಡಿಸುವ ಭರವಸೆ ನೀಡಿದರು ಹಾಗೂ ಹಸುಗಳ ಮಾಲೀಕಗೆ ಹೊಸ ಹಸು ಕೊಡಿಸುವೆ ಎಂದರು.
ಬಿಗಿ ಪೊಲೀಸ್ ಭದ್ರತೆ:
ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡರು. ಕೆಎಸ್ಆರ್‌ಪಿ, ಸಿಎಆರ್ ತುಕಡಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು ಸೇರಿ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಭದ್ರತೆ ಹೆಚ್ಚಿಸಿದರು. ಸಕಾಲಕ್ಕೆ ಮುನ್ನೆಚ್ಚರಿಕಾ ಭದ್ರತಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡರು.
ಘಟನಾ ಸ್ಥಳದಲ್ಲಿ ಸಿಸಿಟಿವಿ ಇಲ್ಲ
ಘಟನಾ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾಗಳು ಇಲ್ಲ. ಈ ಪ್ರದೇಶದಲ್ಲಿ ರಾತ್ರಿ ವೇಳೆ ಮಾದಕ ವ್ಯಸನಿಗಳ ಉಪಟಳ ಹೆಚ್ಚಿದೆ. ಮಹಿಳೆಯರು, ಹೆಣ್ಣು ಮಕ್ಕಳು ರಾತ್ರಿ ವೇಳೆ ಓಡಾಡುವುದೂ ಕಷ್ಟವಾಗಿದೆ. ಪುಂಡರ ಹಾವಳಿ ಮಿತಿ ಮೀರಿದೆ. ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೂಕಪ್ರಾಣಿಗಳ ರೋಧನೆಗೆ ಕಣ್ಣೀರಿಟ್ಟ ಜನ
ಮೂಕಪ್ರಾಣಿಗಳ ಮೇಲೆ ಕಿಡಿಗೇಡಿಗಳು ನಡೆಸಿರುವ ಹೀನ ಕೃತ್ಯ ಕಂಡು ಸ್ಥಳೀಯರು ಕಣ್ಣೀರಿಟ್ಟರು. ಉಗ್ರ, ಜಿಹಾದಿ ಮನಸ್ಥಿತಿಯವರು ಮಾತ್ರ ಇಂಥ ಹೀನ ಕೃತ್ಯ ಎಸಗಲು ಸಾಧ್ಯ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ದ್ವೇಷದ ಹಿನ್ನೆಲೆಯಲ್ಲಿ ಕೆಚ್ಚಲು ಕೊಯ್ದಿದ್ದಾರೆ: ಹಸು ಮಾಲೀಕ
ನಲ್ವತ್ತು ವರ್ಷಗಳಿಂದ ನಾನು ಹಸುಗಳನ್ನು ಸಾಕಿಕೊಂಡು ಹಾಲು ವ್ಯಾಪಾರ ಮಾಡುತ್ತಿದ್ದೇನೆ. ಆರು ತಿಂಗಳ ಹಿಂದೆ ಚಾಮರಾಜಪೇಟೆ ಪಶು ಆಸ್ಪತ್ರೆ ಉಳಿವಿಗಾಗಿ ನಡೆದ ಪ್ರತಿಭಟನೆಯಲ್ಲಿ ನಾನೂ ಭಾಗಿಯಾಗಿದ್ದೆ. ಹೀಗಾಗಿ ದ್ವೇಷದ ಹಿನ್ನೆಲೆಯಲ್ಲಿ ನನ್ನ ಹಸುಗಳ ಕೆಚ್ಚಲು ಕುಯ್ದಿದ್ದಾರೆ. ಒಂದು ಹಸುವಿನ ಮೊಲೆ ಸಂಪೂರ್ಣ ತುಂಡಾಗಿದೆ. ಇನ್ನೆರಡು ಹಸುಗಳ ಮೊಲೆಗಳು ಬಹುತೇಕ ಕತ್ತರಿಸಲ್ಪಟ್ಟಿವೆ. ಅವುಗಳನ್ನು ತೆಗೆದು ಹಾಕಬೇಕು ಎಂದು ವೈದ್ಯರು ತಿಳಿಸಿದ್ದಾರೆ. ನಾನು ಹಸು ಸಾಕದಂತೆ ಭಯಪಡಿಸಲು ಈ ಕೃತ್ಯ ಮಾಡಿರಬಹುದು. ಇದಕ್ಕೆ ನಾನು ಹೆದರುವುದಿಲ್ಲ. ನಾನು ಹುಟ್ಟಿ ಬೆಳೆದಿದ್ದು ಇಲ್ಲೇ, ಸಾಯುವುದೂ ಇಲ್ಲೇ ಎಂದು ಹಸುಗಳ ಮಾಲೀಕ ಕರ್ಣ ಹೇಳಿದರು.