ವಿದ್ಯಾರ್ಥಿ ಮೆಟ್ರೋಗೆ ತಲೆ ಕೊಟ್ಟಿದ್ದಕ್ಕೆ ಸಿ ಗ್ರೇಡ್‌ ಅಂಕವೇ ಕಾರಣ

| Published : Mar 23 2024, 01:13 AM IST / Updated: Mar 23 2024, 12:34 PM IST

Metro suicide
ವಿದ್ಯಾರ್ಥಿ ಮೆಟ್ರೋಗೆ ತಲೆ ಕೊಟ್ಟಿದ್ದಕ್ಕೆ ಸಿ ಗ್ರೇಡ್‌ ಅಂಕವೇ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಮೆಟ್ರೋ ಹಳಿಗೆ ಜಿಗಿದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಮಾನಸಿಕ ಖಿನ್ನತೆಯೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ಹಳಿಗೆ ಜಿಗಿದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಮಾನಸಿಕ ಖಿನ್ನತೆಯೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮುಂಬೈ ಮೂಲದ ಧೃವ್‌ ಜತ್ತಿನ್‌ ಠಕ್ಕರ್‌(19) ಗುರುವಾರ ಮಧ್ಯಾಹ್ನ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬರುವಾಗ ಏಕಾಏಕಿ ಹಳಿಗೆ ಜಿಗಿದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್‌ ಠಾಣೆ ಪೊಲೀಸರು, ಶುಕ್ರವಾರ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಕಡಿಮೆ ಅಂಕ ಬಂದಿದ್ದಕ್ಕೆ ಬೇಸರ: ಮೃತ ಧೃವ್‌ ನಗರದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಬಿಎ-ಎಲ್‌ಎಲ್‌ಬಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. 

ಮೊದಲ ತ್ರೈಮಾಸಿಕ ಪರೀಕ್ಷೆಯಲ್ಲಿ ಎ-ಗ್ರೇಡ್ ಪಡೆದಿದ್ದ. ಎರಡನೇ ತ್ರೈಮಾಸಿಕ ಪರೀಕ್ಷೆಯಲ್ಲಿ ಸಿ-ಗ್ರೇಡ್ ಪಡೆದಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಧೃವ್‌, ಕಡಿಮೆ ಅಂಕ ಗಳಿಸಿರುವ ಬಗ್ಗೆ ಪೋಷಕರಿಗೂ ತಿಳಿಸಿದ್ದ. 

ಹೀಗಾಗಿ ತಿಂಗಳ ಹಿಂದೆಯಷ್ಟೇ ತಂದೆ ಮುಂಬೈನಿಂದ ನಗರಕ್ಕೆ ಬಂದು ಧೃವ್‌ಗೆ ಚಿಕಿತ್ಸೆ ಕೊಡಿಸಿ ತೆರಳಿದ್ದರು. ಆದರೂ ಧೃವ್‌ ಈ ಮಾನಸಿಕ ಖಿನ್ನತೆಯಿಂದ ಹೊರಗೆ ಬಂದಿರಲಿಲ್ಲ. ಕೊನೆಗೆ ಆತ್ಮಹತ್ಯೆ ನಿರ್ಧಾರ ಮಾಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಆತ್ಮಹತ್ಯೆಗೂ ಮುನ್ನ ಪೋಷಕರಿಗೆ ಫೋನ್‌: ಗುರುವಾರ ಮಧ್ಯಾಹ್ನ ಕಾಲೇಜಿನಿಂದ ಬಿಎಂಟಿಸಿ ಬಸ್‌ನಲ್ಲಿ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದ ಬಳಿಗೆ ಬಂದಿರುವ ಧೃವ್‌, ಬಳಿಕ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾನೆ. 

ನನ್ನ ಜೀವನ ಅರ್ಥಹೀನ ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ಈ ವೇಳೆ ಪೋಷಕರು, ಕಬ್ಬನ್‌ ಪಾರ್ಕ್‌ಗೆ ತೆರಳಿ ಸುತ್ತಾಡುವಂತೆ ಹೇಳಿದ್ದಾರೆ. 

ಆದರೆ, ಧೃವ್‌ ಕರೆ ಸ್ಥಗಿತಗೊಳಿಸಿ, ತಾನಿರುವ ಲೋಕೇಶನ್‌ ಅನ್ನು ಪೋಷಕರಿಗೆ ವಾಟ್ಸಾಪ್ ಮಾಡಿದ್ದ. ಬಳಿಕ ಮೆಟ್ರೋ ರೈಲು ಬರುವುದನ್ನು ನೋಡಿ ಏಕಾಏಕಿ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.