ಬೆಂಗಳೂರು : ಧರ್ಮರಾಯ ದೇವಾಲಯ ನಿರ್ವಹಣಾ ಸಮಿತಿ ಮುಂದುವರಿಕೆ ಅನುಮತಿಸಿ ಹೈಕೋರ್ಟ್‌ ಆದೇಶ

| N/A | Published : Mar 06 2025, 01:31 AM IST / Updated: Mar 06 2025, 04:27 AM IST

Highcourt

ಸಾರಾಂಶ

ಬೆಂಗಳೂರಿನ ಸುಪ್ರಸಿದ್ಧ ಕರಗ ಮಹೋತ್ಸವವು ಏ.4ರಿಂದ 14ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಹಾಲಿ ಧರ್ಮರಾಯಸ್ವಾಮಿ ದೇವಸ್ಥಾನದ ನಿರ್ವಹಣಾ ಸಮಿತಿ ಮುಂದುವರಿಯಲು ಅನುಮತಿಸಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

 ಬೆಂಗಳೂರು :  ಬೆಂಗಳೂರಿನ ಸುಪ್ರಸಿದ್ಧ ಕರಗ ಮಹೋತ್ಸವವು ಏ.4ರಿಂದ 14ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಹಾಲಿ ಧರ್ಮರಾಯಸ್ವಾಮಿ ದೇವಸ್ಥಾನದ ನಿರ್ವಹಣಾ ಸಮಿತಿ ಮುಂದುವರಿಯಲು ಅನುಮತಿಸಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಹೊಸ ಸಮಿತಿ ರಚಿಸುವವರೆಗೆ ಹಾಲಿ ಸಮಿತಿ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಧರ್ಮರಾಯಸ್ವಾಮಿ ದೇವಸ್ಥಾನ ನಿರ್ವಹಣಾ ಸಮಿತಿಯ ಕೆ.ಸತೀಶ್‌ ಅವರು ಸಲ್ಲಿಸಿದ್ದ ಅರ್ಜಿ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು, ಧರ್ಮರಾಯ ಸ್ವಾಮಿ ದೇವಸ್ಥಾನದ ಹಾಲಿ ನಿರ್ವಹಣಾ ಸಮಿತಿ ಅವಧಿಯು ಮಾ.21ಕ್ಕೆ ಮುಗಿಯಲಿದೆ.‌ ಆದರೆ, ಕರಗ ಸಿದ್ಧತೆ ಎರಡು ತಿಂಗಳ ಹಿಂದೆಯೇ ಆರಂಭವಾಗಿದೆ. ಏ.4ರಿಂದ 14ರವರೆಗೆ ಕರಗ ಮಹೋತ್ಸವ ನಡೆಯಲಿದೆ. ಒಂದೊಮ್ಮೆ ಹಾಲಿ ನಿರ್ವಹಣಾ ಸಮಿತಿಯನ್ನು ಬದಲಿಸಿದರೆ ಕರಗ ಮಹೋತ್ಸವ ಸುಗಮವಾಗಿ ನಡೆಯಲು ಅಡಚಣೆಯಾಗಲಿದೆ. ಇದರಿಂದ ಕರಗ ಮಹೋತ್ಸವ ಮುಗಿಯುವವರೆಗೆ ಹಾಲಿ ಸಮಿತಿಯನ್ನೇ ಮುಂದುವರಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.ಅರ್ಜಿದಾರರ ಮನವಿಗೆ ರಾಜ್ಯ ಸರ್ಕಾರದ ವಕೀಲರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಧರ್ಮರಾಯ ಸ್ವಾಮಿ ದೇವಸ್ಥಾನ ಹಾಲಿ ನಿರ್ವಹಣಾ ಸಮಿತಿಯು ಕರಗ ಮಹೋತ್ಸವ ಮುಗಿಯವವರೆಗೆ ಅಂದರೆ ಏಪ್ರಿಲ್ 15ರವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.