ಸಾರಾಂಶ
ಕಮಾಂಡ್ ಆಸ್ಪತ್ರೆಯ ವಿಸ್ತರಣೆಗೆ 530 ಮರ ಹಾಗೂ ಉಪನಗರ ರೈಲು ಯೋಜನೆಯಡಿ (ಬಿಎಸ್‌ಆರ್‌ಪಿ) ಅಂಬೇಡ್ಕರ್ ನಗರ ಮತ್ತು ಮುದ್ದೇನಹಳ್ಳಿ ಮಾರ್ಗದಲ್ಲಿ 1988 ಮರಗಳನ್ನು ತೆರವುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆ-ರೈಡ್) ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು : ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಭಾರತೀಯ ವಾಯುಪಡೆಯ ಕಮಾಂಡ್ ಆಸ್ಪತ್ರೆಯ ವಿಸ್ತರಣೆಗೆ 530 ಮರ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆಯಡಿ (ಬಿಎಸ್‌ಆರ್‌ಪಿ) ಅಂಬೇಡ್ಕರ್ ನಗರ ಮತ್ತು ಮುದ್ದೇನಹಳ್ಳಿ ಮಾರ್ಗದಲ್ಲಿ 1988 ಮರಗಳನ್ನು ತೆರವುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆ-ರೈಡ್) ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಮೆಟ್ರೋ ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿ ಮರ ಕಡಿಯುವುದಕ್ಕೆ ಆಕ್ಷೇಪಿಸಿ ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮರ ತಜ್ಞರ ಸಮಿತಿ (ಟಿಇಸಿ) ಶಿಫಾರಸಿನ ಮೇರೆಗೆ ಕಮಾಂಡ್ ಆಸ್ಪತ್ರೆಗಾಗಿ 530 ಮರಗಳು ಮತ್ತು ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಅಂಬೇಡ್ಕರ್ ನಗರದಿಂದ ಮುದ್ದನಹಳ್ಳಿಯವರೆಗಿನ ಮಾರ್ಗದಲ್ಲಿ 1988 ಮರಗಳ ಕಡಿಯಲು ಹಾಗೂ 289 ಮರಗಳನ್ನು ಸ್ಥಳಾಂತರ ಮಾಡಲು ನ್ಯಾಯಪೀಠ ಒಪ್ಪಿಗೆ ನೀಡಿದೆ. ಅಲ್ಲದೆ, ಕೆ-ರೈಡ್ ಕಡೆಯಿಂದ 580 ಮರಗಳನ್ನು ಅನುಮತಿ ಇಲ್ಲದೆ ಕತ್ತರಿಸಿರುವ ಹಿನ್ನೆಲೆಯಲ್ಲಿ ಪರಿಹಾರವಾಗಿ 5000 ಗಿಡ ನೆಡಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.