ಇನ್ನೊಮ್ಮೆ ಗಣತಿ ಮಾಡಿ - ವೀರಶೈವ - ಲಿಂಗಾಯತರ ಒಟ್ಟಾಗಿ ಪರಿಗಣಿಸಿ : ಸಚಿವೆ ಲಕ್ಷ್ಮಿ

| N/A | Published : Apr 15 2025, 07:18 AM IST / Updated: Apr 15 2025, 07:19 AM IST

Lakshmi hebbalkar

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿ ವರದಿಯಲ್ಲಿನ ಜಾತಿವಾರು ಅಂಕಿ ಅಂಶದ ಬಗ್ಗೆ ವಿಪಕ್ಷ ಬಿಜೆಪಿ-ಜೆಡಿಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ : ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿ ವರದಿಯಲ್ಲಿನ ಜಾತಿವಾರು ಅಂಕಿ ಅಂಶದ ಬಗ್ಗೆ ವಿಪಕ್ಷ ಬಿಜೆಪಿ-ಜೆಡಿಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಜಾತಿ ಗಣತಿ ನಡೆಸಬೇಕೆಂದು ಹೇಳುವ ಮೂಲಕ ಜಾತಿ ಗಣತಿ ವರದಿಗೆ ತಕರಾರು ಮಂಡಿಸಿದ ಮೊದಲ ಸಚಿವರಾಗಿದ್ದಾರೆ.

ಜನಗಣತಿಯಲ್ಲಿನ ಜಾತಿವಾರು ಅಂಕಿ-ಅಂಶದ ಬಗ್ಗೆ ಹಲವು ಸಚಿವರಲ್ಲಿ ಆಕ್ಷೇಪವಿದ್ದರೂ ಯಾರೂ ಬಹಿರಂಗವಾಗಿ ಹೇಳಿಕೆ ನೀಡದೆ ಗುರುವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುತ್ತೇವೆ ಎಂದಷ್ಟೇ ಹೇಳಿದ್ದರು. ಆದರೆ ಸಚಿವೆ ಲಕ್ಷ್ಮೀ ಇದಕ್ಕಿಂತ ಭಿನ್ನ ಹೇಳಿಕೆ ನೀಡಿದ್ದಾರೆ,

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮೀ ಅವರು, ‘ಜಾತಿ ಗಣತಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ಆದರೆ ಈ ಜಾತಿ ಗಣತಿಯಲ್ಲಿ ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಹಾಗಾಗಿ ಜಾತಿ ಗಣತಿಯನ್ನು ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟಾಗಿ ಪರಿಗಣಿಸಿ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

‘ಜಾತಿ ಗಣತಿ ವರದಿಯಲ್ಲಿ ಬೇರೆ ಎಲ್ಲಾ ಜಾತಿಯ ಜನರು ಹೆಚ್ಚಾಗಿ ಕಾಣುತ್ತಿದ್ದಾರೆ. ಆದರೆ ವೀರಶೈವ- ಲಿಂಗಾಯತ ಪ್ರತ್ಯೇಕವಾಗಿ ಪರಿಗಣಿಸಿದ್ದರಿಂದ ಒಡೆದು ಹೋಗಿದ್ದು, ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.