ಸಾರಾಂಶ
ಗೃಹ ಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವುದು ಸ್ವಲ್ಪ ವಿಳಂಬವಾಗಿತ್ತು. ಈಗ ಎಲ್ಲವೂ ಸರಿಯಾಗಿದ್ದು, ಎರಡು ತಿಂಗಳ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರು : ಗೃಹ ಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವುದು ಸ್ವಲ್ಪ ವಿಳಂಬವಾಗಿತ್ತು. ಈಗ ಎಲ್ಲವೂ ಸರಿಯಾಗಿದ್ದು, ಎರಡು ತಿಂಗಳ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಾಲ್ಕು ತಿಂಗಳಿಂದ ಗೃಹಲಕ್ಷ್ಮೀ ಹಣ ಬಾಕಿಯಿರುವ ಬಗ್ಗೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಸ್ವಲ್ಪ ವಿಳಂಬವಾಗಿತ್ತು. ಇದೀಗ ಎರಡು ತಿಂಗಳ ಬಾಕಿ ಹಣ ಬಿಡುಗಡೆಯಾಗಲಿದೆ. ಇನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳನ್ನು ಜರಡಿ ಹಿಡಿದು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ಐದು ವರ್ಷವೂ ಯೋಜನೆಯ ಹಣವು ಫಲಾನುಭವಿಗಳಿಗೆ ತಲುಪಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ. ರಾಜ್ಯಪಾಲರ ಭಾಷಣವನ್ನು ಟೀಕಿಸುವುದಕ್ಕೂ ಮುನ್ನ ಬಿಜೆಪಿಯವರು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಎಥಿಕ್ಸ್ ಸಮಿತಿ ವಿಚಾರ ಗೊತ್ತಿಲ್ಲ: ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಅಶ್ಲೀಲ ಪದ ಪ್ರಯೋಗ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ನಿಂದನೆ ಮಾಡಿರುವ ಪ್ರಕರಣವನ್ನು ನೈತಿಕ ಸಮಿತಿಗೆ (ಎಥಿಕ್ಸ್ ಕಮಿಟಿ) ನೀಡಿರುವುದು ಗೊತ್ತಿಲ್ಲ. ನಾನು ಇಂದಷ್ಟೇ ಬೆಂಗಳೂರಿಗೆ ಬಂದಿದ್ದೇನೆ. ನಿಮಗೆ (ಮಾಧ್ಯಮ) ಎಷ್ಟು ಮಾಹಿತಿ ಇದೆಯೋ, ಅಷ್ಟೇ ಮಾಹಿತಿ ನನಗೂ ಇದೆ. ಈ ರೀತಿ ಯಾರಿಗೂ ಆಗಬಾರದೆನ್ನುವುದೇ ನನ್ನ ಕಳಕಳಿ ಎಂದರು.
ಲೈಂಗಿಕ ದೌರ್ಜನ್ಯ- ಶಿಕ್ಷಕನ ವಿರುದ್ಧ ಕಠಿಣ ಕ್ರಮ:
ಎಚ್.ಡಿ.ಕೋಟೆ ತಾಲೂಕಿನ ಶಾಲೆಯ ಶಿಕ್ಷಕನೋರ್ವ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವರದಿ ಗಮನಕ್ಕೆ ಬಂದಿದೆ. ಲೈಂಗಿಕ ದೌರ್ಜನ್ಯ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಈ ಬಗ್ಗೆ ದೂರು ದಾಖಲಿಸಲು ತಿಳಿಸಿದ್ದು ತಪ್ಪಿತಸ್ಥ ಶಿಕ್ಷನ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಹೇಳಿದರು.