ವಾರಕ್ಕೆ ಎರಡು ಮೊಬೈಲ್‌ ಖರೀದಿಸಿ ಜೈಲಲ್ಲಿ ಉಗ್ರರಿಗೆ ನೀಡುತ್ತಿದ್ದ ವೈದ್ಯ

| N/A | Published : Jul 15 2025, 08:35 AM IST

Parappana agrahara
ವಾರಕ್ಕೆ ಎರಡು ಮೊಬೈಲ್‌ ಖರೀದಿಸಿ ಜೈಲಲ್ಲಿ ಉಗ್ರರಿಗೆ ನೀಡುತ್ತಿದ್ದ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮನೋವೈದ್ಯ ಸೇರಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಸೋಮವಾರ ಆದೇಶಿದೆ.

ಬೆಂಗಳೂರು : ಜೈಲಿನಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಮನೋವೈದ್ಯ ಸೇರಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಸೋಮವಾರ ಆದೇಶಿದೆ.

ಆರು ದಿನಗಳ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಆರೋಪಿಗಳಾದ ಮನೋವೈದ್ಯ ಡಾ.ನಾಗರಾಜ್‌, ಎಎಸ್‌ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರ ಜುನೈದ್‌ ಅಹಮದ್‌ನ ತಾಯಿ ಅನೀಸ್‌ ಫಾತಿಮಾಳನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ವಾರಕ್ಕೆರಡು ಮೊಬೈಲ್‌ ಖರೀದಿ:

ಬಂಧಿತ ಮೂವರ ಪೈಕಿ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ.ನಾಗರಾಜ್‌ ಹಣದಾಸೆಗೆ ತನ್ನ ಸಹಾಯಕಿ ಪವಿತ್ರಾ ಹೆಸರಿನಲ್ಲಿ ವಾರಕ್ಕೆರಡು ಮೊಬೈಲ್‌ ಖರೀದಿಸಿರುವುದು ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗೆ ಖರೀದಿಸಿದ ಮೊಬೈಲ್‌ಗಳನ್ನು ಜೈಲಿನಲ್ಲಿರುವ ಉಗ್ರ ಟಿ.ನಾಸೀರ್‌, ಶಂಕಿತ ಉಗ್ರರು, ಇತರೆ ಪ್ರಕರಣಗಳ ಕೈದಿಗಳಿಗೆ ಮಾರಾಟ ಮಾಡಿರುವುದು ಕಂಡು ಬಂದಿದೆ.

ಉಗ್ರನ ಎಸ್ಕೇಪ್‌ಗೆ ಸಂಚು:

ಬಂಧಿತ ಎಎಸ್‌ಐ ಚಾಂದ್‌ ಪಾಷಾ ಜೈಲಿನಲ್ಲಿರುವ ಉಗ್ರ ಟಿ.ನಾಸೀರ್‌ನನ್ನು ತಪ್ಪಿಸಿಕೊಳ್ಳಲು ಸಂಚು ರೂಪಿಸಿರುವುದು ಎನ್‌ಐಎ ತನಿಖೆ ವೇಳೆ ಬಯಲಾಗಿದೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಗ್ರೆನೇಡ್‌ ಸ್ಫೋಟಿಸಿ ಪೊಲೀಸರ ಸಮವಸ್ತ್ರ ಧರಿಸಿದ ಶಂಕಿತರ ಮುಖಾಂತರ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದ. ಈ ಸಂಬಂಧ ಉಗ್ರ ಟಿ.ನಾಸೀರ್‌, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್‌ ಅಹಮದ್‌ ಹಾಗೂ ಈತನ ತಾಯಿ ಅನೀಸ್‌ ಫಾತಿಮಾ ಜೊತೆಗೆ ಸಿಗ್ನಲ್‌ ಆ್ಯಪ್‌ ಮುಖಾಂತರ ಮಾತುಕತೆ ನಡೆಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ಮೂವರು ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿರುವ ಎನ್‌ಐಎ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಗತ್ಯ ಬಿದ್ದರೆ ಮತ್ತೆ ಮೂವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಅರ್ಜಿ ಸಲ್ಲಿಕೆ:

ಜೈಲಿನಿಂದಲೇ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಗಾಗಿರುವ ಎಲ್‌ಇಟಿ ಉಗ್ರ ಟಿ. ನಾಸೀರ್‌, ಸೈಯದ್ ಸುಹೈಲ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮೊಹಮ್ಮದ್ ಫೈಸಲ್, ಸಲ್ಮಾನ್ ಖಾನ್‌ ಸೇರಿ 8 ಮಂದಿ ಶಂಕಿತರು ಸ್ವಯಂ ಪ್ರೇರಿತರಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ಎನ್‌ಎಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ಈ ಅರ್ಜಿ ವಿಚಾರಣೆಯನ್ನು ಜು.16ಕ್ಕೆ ಮುಂದೂಡಿದೆ.

ಹಾರ್ಪಿಕ್‌ ಕುಡಿದು ಹೈ ಡ್ರಾಮಾ!

ಎನ್‌ಐಎ ಕಸ್ಟಡಿಯಲ್ಲಿ ಅನೀಸ್‌ ಫಾತೀಮಾ ವಿಚಾರಣೆಗೆ ಸಹರಿಸದೆ ಹೈಡ್ರಾಮವನ್ನೇ ಮಾಡಿದ್ದಾಳೆ. ಎನ್‌ಐಎ ವಿಚಾರಣಾ ಕೊಠಡಿಯಲ್ಲಿ ಶೌಚಾಲಯಕ್ಕೆ ಹೋಗಿ ಹಾರ್ಪಿಕ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಅಧಿಕಾರಿಗಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ವೈದ್ಯರ ಅಭಿಪ್ರಾಯದ ಮೇರೆಗೆ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read more Articles on