ಸಾರಾಂಶ
ಗ್ರಾಮದ ನಿವಾಸಿ ಎ.ಬಿ.ಚಿಕ್ಕಬಸವಣ್ಣರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲು ಮಾಡಿಕೊಂಡು ಬೆಂಗಳೂರಿನಲ್ಲಿ ಇದ್ದರು. ಮನೆಯಲ್ಲಿ ಯಾರೂ ಇಲ್ಲದ ಸುಳಿವು ಸಿಕ್ಕ ಸಮಯ ನೋಡಿಕೊಂಡು ಮನೆ ಬಾಗಿಲು ಮುರಿದು ಒಳನುಗ್ಗಿದ ಚಲಾಕಿ ಕಳ್ಳರು ಮನೆಯಲ್ಲಿದ್ದ 45 ಗ್ರಾಂ ಚಿನ್ನ, 5 ಗ್ರಾಂ ತೂಕದ 4 ಬೆಳ್ಳಿ ಪದಾರ್ಥಗಳು 35 ಸಾವಿರ ರು. ದೋಚಿಕೊಂಡು ಪರಾರಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ಮನೆ ಬಾಗಿಲ ಬೀಗ ಮುರಿದು ಬೀರುವನಲ್ಲಿದ್ದ 4 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿರುವ ಘಟನೆ ಸಮೀಪದ ಅಗಸನಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಗ್ರಾಮದ ನಿವಾಸಿ ಎ.ಬಿ.ಚಿಕ್ಕಬಸವಣ್ಣರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲು ಮಾಡಿಕೊಂಡು ಬೆಂಗಳೂರಿನಲ್ಲಿ ಇದ್ದರು. ಮನೆಯಲ್ಲಿ ಯಾರೂ ಇಲ್ಲದ ಸುಳಿವು ಸಿಕ್ಕ ಸಮಯ ನೋಡಿಕೊಂಡು ಮನೆ ಬಾಗಿಲು ಮುರಿದು ಒಳನುಗ್ಗಿದ ಚಲಾಕಿ ಕಳ್ಳರು ಮನೆಯಲ್ಲಿದ್ದ 45 ಗ್ರಾಂ ಚಿನ್ನ, 5 ಗ್ರಾಂ ತೂಕದ 4 ಬೆಳ್ಳಿ ಪದಾರ್ಥಗಳು 35 ಸಾವಿರ ರು. ದೋಚಿಕೊಂಡು ಪರಾರಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಮನೆ ಮಾಲೀಕ ಚಿಕ್ಕ ಬಸವಣ್ಣರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದು ಮನೆಯಲ್ಲಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.ಘಟನಾ ಸ್ಥಳಕ್ಕೆ ಮಳವಳ್ಳಿ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಬಿ.ಎಸ್.ಶ್ರೀಧರ್ ಮತ್ತು ಪಿಎಸ್ಐ ಬಿ.ಮಹೇಂದ್ರ ಭೇಟಿ ನೀಡಿ ಮಾಹಿತಿ ಪಡೆದರು.
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದರು. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನದಲ್ಲಿ ಅಪರಿಚಿತರು ಓಡಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಕಳ್ಳರನ್ನು ಬಂಧಿಸಲು ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.