ಡ್ರಗ್ಸ್‌ ಮಾರಾಟ ದಂಧೆ: ಪದವೀಧರರು ಜೈಲಿಗೆ

| Published : Nov 06 2024, 01:26 AM IST

ಸಾರಾಂಶ

ಡ್ರಗ್ಸ್ ಮಾರಾಟ ದಂಧೆಗಿಳಿದಿದ್ದ ಬಿಇ ಪದವೀಧರ ಹಾಗೂ ಆತನ ಸ್ನೇಹಿತನನ್ನು ವಿಲ್ಸನ್ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡ್ರಗ್ಸ್ ಮಾರಾಟ ದಂಧೆಗಿಳಿದಿದ್ದ ಬಿಇ ಪದವೀಧರ ಹಾಗೂ ಆತನ ಸ್ನೇಹಿತನನ್ನು ವಿಲ್ಸನ್ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ನವನೀತ್ ಹಾಗೂ ಶಾಲಿನ್‌ ಬಾಬು ಬಂಧಿತರಾಗಿದ್ದು, ಆರೋಪಿಗಳಿಂದ 975 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, 407 ಗ್ರಾಂ ಕೊಕೇನ್‌ ಹಾಗೂ ಮೊಬೈಲ್‌ಗಳು ಸೇರಿದಂತೆ ₹1.37 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ವಿಲ್ಸನ್ ಗಾರ್ಡನ್‌ 10ನೇ ಕ್ರಾಸ್‌ನಲ್ಲಿ ಹೊಂಬೇಗೌಡ ಆಟದ ಮೈದಾನ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ಎಂ.ಜಿ.ಫಾರೂಕ್ ಪಾಷ ತಂಡ ಆರೋಪಿಗಳನ್ನು ಬಂಧಿಸಿದೆ.

ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಶಾಲಿನ್‌ ಬಾಬು ಬಿಇ ಹಾಗೂ ಕಣ್ಣೂರು ಜಿಲ್ಲೆಯ ನವನೀತ್ ಬಿಸಿಎ ಪದವೀಧರರಾಗಿದ್ದು, ಖಾಸಗಿ ಕಂಪನಿಗಳಿಗೆ ವೆಬ್ ಪೇಜ್‌ಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದಿಸಲು ತಮ್ಮ ರಾಜ್ಯದಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ನಗರಕ್ಕೆ ಬಂದು ಕೆಲ ದಿನಗಳು ಲಾಡ್ಜ್‌ಗಳಲ್ಲಿ ಉಳಿದು ಅವರು ದಂಧೆ ನಡೆಸುತ್ತಿದ್ದರು. ಈ ಡ್ರಗ್ಸ್ ಪೂರೈಕೆ ಬಗ್ಗೆ ಸಿಕ್ಕ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದಾಗ ವಿಲ್ಸನ್‌ ಗಾರ್ಡನ್‌ನ ಹೊಂಬೇಗೌಡ ಆಟದ ಮೈದಾನದ ಬಳಿ ನವನೀತ್ ಸಿಕ್ಕಿಬಿದ್ದ. ಬಳಿ ಆತ ನೀಡಿದ ಮಾಹಿತಿ ಮೇರೆಗೆ ಮಡಿವಾಳ ಸೇತುವೆ ಸಮೀಪ ಶಾಲಿನ್‌ ಬಾಬು ಸೆರೆಯಾದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮೋಜು ಮಸ್ತಿ

ಡ್ರಗ್ಸ್‌ ದಂಧೆಯಲ್ಲಿ ಸಂಪಾದಿಸಿದ ಹಣದಲ್ಲಿ ಆರೋಪಿಗಳು ಮೋಜು ಮಸ್ತಿ ಮಾಡುತ್ತಿದ್ದರು. ಕೇರಳದಲ್ಲಿ ಯುವತಿ ಜತೆ ಶಾಮೀಲ್‌ ಲಿವಿಂಗ್ ಟು ಗೆದರ್‌ನಲ್ಲಿ ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.