ವಿಶ್ವಮಟ್ಟದಲ್ಲಿ ‘ಮಾಹಿತಿ ತಂತ್ರಜ್ಞಾನ’ ವಿಸ್ತರಣೆಗೆ ಭೂಮಿಕೆ ಕಲ್ಪಿಸಿ ಖ್ಯಾತಿ ಪಡೆದಿರುವ ಕರುನಾಡು ಈಗ ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾಗೂ ‘ಬೃಹತ್ ಮಾರುಕಟ್ಟೆ’ಯಾಗಿ ರೂಪುಗೊಳ್ಳುತ್ತಿರುವ ಆತಂಕ ಶುರುವಾಗಿದೆ. ರಾಜ್ಯಕ್ಕೆ 10ಕ್ಕೂ ಹೆಚ್ಚು ದೇಶಗಳಿಂದ ಡ್ರಗ್ಸ್‌ ಪ್ರವಾಹವೇ ಬರುತ್ತಿದೆ.

- ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾಗೆ ಈಗ ಕರ್ನಾಟಕ ಬೃಹತ್‌ ಮಾರುಕಟ್ಟೆ- ರಾಜ್ಯದಲ್ಲಿ ಮೂರೇ ವರ್ಷದಲ್ಲಿ ಸಾವಿರಾರು ಕೋಟಿ ಮೌಲ್ಯದ ಮಾದಕ ವಸ್ತು ವಶ

---

ಡ್ರಗ್ಸ್‌ಗೆ ಕಡಿವಾಣ:ಜೈಲರ್‌ ಮೇಲೇ ಕೈದಿಗಳ ಹಲ್ಲೆ- ಕಾರವಾರ ಜೈಲಲ್ಲಿ ಘಟನೆಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಂಗಳೂರು ಮೂಲದ ಇಬ್ಬರು ಕೈದಿಗಳು ಶನಿವಾರ ಕಾರಾಗೃಹದ ಜೈಲರ್ ಸೇರಿ ಕರ್ತವ್ಯ ನಿರತ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ​ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ.

==

ಡ್ರಗ್ಸ್‌ಮುಕ್ತ ಕರ್ನಾಟಕರಾಜ್ಯ ಸರ್ಕಾರದ ಧ್ಯೇಯ‘ಡ್ರಗ್ಸ್ ಮುಕ್ತ ಕರ್ನಾಟಕ’ ಎಂಬುದು ನಮ್ಮ ಸರ್ಕಾರದ ಧ್ಯೇಯ. ಡ್ರಗ್ಸ್ ಮಾಫಿಯಾ ಬಗ್ಗುಬಡಿಯಲು ಸಕಲ ರೀತಿಯಲ್ಲೂ ಪ್ರಯತ್ನ ನಡೆಸಿದ್ದೇವೆ. ಹಂತ ಹಂತವಾಗಿ ಡ್ರಗ್ಸ್ ಮಾರಾಟ ಜಾಲ ನಿರ್ಮೂಲನೆಯಾಗಲಿದೆ. ಪೊಲೀಸರ ಕಠಿಣ ಕ್ರಮಗಳಿಂದಲೇ 3 ವರ್ಷಗಳಲ್ಲಿ 400 ಕೋಟಿ ರು. ಅಧಿಕ ಡ್ರಗ್ಸ್ ಜಪ್ತಿಯಾಗಿದೆ.-ಡಾ.ಜಿ.ಪರಮೇಶ್ವರ್, ಗೃಹ ಸಚಿವ ==ಮೆಕ್ಸಿಕೋ ಮೀರಿಸುತ್ತಿದೆ

ಬೆಂಗಳೂರು ಡ್ರಗ್‌ ಜಾಲ

ಮೆಕ್ಸಿಕೋವನ್ನು ಮಾದಕ ವಸ್ತುಗಳ ಸ್ವರ್ಗ ಎನ್ನುತ್ತಾರೆ. ಆದರೆ, ಬೆಂಗಳೂರು ಅದನ್ನೂ ಮೀರಿಸುತ್ತಿದೆ. ಕೋಟ್ಯಂತರ ರು. ಮೌಲ್ಯದ ಕೆ.ಜಿ. ಗಟ್ಟಲೆ ಅಫೀಮು, ಗಾಂಜಾ ಮತ್ತಿತರ ಮಾಸಕ ವಸ್ತುಗಳು ಮಾರಾಟ ಆಗುತ್ತಿದೆ. ಇದರಿಂದ ಮುಂದೆ ಆಗುವ ಅನಾಹುತ ತಪ್ಪಿಸಲು ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು-ಆರ್.ಅಶೋಕ್‌, ವಿಧಾನಸಭೆಯ ಪ್ರತಿಪಕ್ಷದ ನಾಯಕ==

ಕರುನಾಡು

ಡ್ರಗ್‌ಬೀಡು

--

ಖಾಕಿ ಕಣ್ಗಾವಲು ತಪ್ಪಿಸಿ ರಾಜ್ಯದ ಯುವಜನರಿಗೆ ನಶೆಯ ವಿಷ ಏರಿಸಲು ಡ್ರಗ್ಸ್ ಮಾಫಿಯಾ ಯತ್ನಿಸುತ್ತಲೇ ಇದೆ. ರಾಜ್ಯದಲ್ಲಿ ಗುಪ್ತವಾಗಿ ತನ್ನ ಬೇರು ಭದ್ರಗೊಳಿಸುತ್ತಿರುವ ಕೋಟ್ಯಂತರ ರು. ವಹಿವಾಟಿನ ಈ ‘ಮಾದಕ ವಸ್ತು ಮಾರಾಟ ಜಾಲ’ ಕುರಿತು ‘ಕನ್ನಡಪ್ರಭ’ ಸರಣಿ ವರದಿಗಳ ಮೂಲಕ ಬೆಳಕು ಚೆಲ್ಲಲಿದೆ.

--

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವಮಟ್ಟದಲ್ಲಿ ‘ಮಾಹಿತಿ ತಂತ್ರಜ್ಞಾನ’ ವಿಸ್ತರಣೆಗೆ ಭೂಮಿಕೆ ಕಲ್ಪಿಸಿ ಖ್ಯಾತಿ ಪಡೆದಿರುವ ಕರುನಾಡು ಈಗ ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾಗೂ ‘ಬೃಹತ್ ಮಾರುಕಟ್ಟೆ’ಯಾಗಿ ರೂಪುಗೊಳ್ಳುತ್ತಿರುವ ಆತಂಕ ಶುರುವಾಗಿದೆ. ರಾಜ್ಯಕ್ಕೆ 10ಕ್ಕೂ ಹೆಚ್ಚು ದೇಶಗಳಿಂದ ಡ್ರಗ್ಸ್‌ ಪ್ರವಾಹವೇ ಬರುತ್ತಿದೆ.

ಒಂದೆಡೆ ಮಾದಕ ವಸ್ತು ‘ನಶೆ’ ಜಾಲ ಶರವೇಗದಲ್ಲಿ ಯುವ ಸಮೂಹವನ್ನು ಆ‍ವರಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಭದ್ರತಾ ಕಣ್ಗಾವಲು ತಪ್ಪಿಸಿ ಕೋಟ್ಯಂತರ ರು. ಮೌಲ್ಯದ ಡ್ರಗ್ಸ್ ರಾಜ್ಯದ ಒಳನುಸುಳುತ್ತಿದೆ. ಈ ಬೆಳವಣಿಗೆಯಿಂದ ನಾಡಿನಲ್ಲಿ ಮಾದಕ ವಸ್ತು ಮಾರಾಟ ಸಂಘಟಿತ ಉದ್ಯಮವಾಗಿ ಬೆಳೆಯುತ್ತಿರುವ ಭೀತಿ ಮನೆಮಾಡಿದೆ. ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಂಕಿ-ಅಂಶಗಳೇ ಈ ಆತಂಕಕ್ಕೆ ಪುಷ್ಟಿ ನೀಡುತ್ತಿವೆ.

ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರು. ಮೌಲ್ಯದ 19.5 ಟನ್‌ ಗಾಂಜಾ ಹಾಗೂ 1.5 ಟನ್‌ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ಡ್ರಗ್ಸ್ ದಂಧೆ ಮಿತಿಮೀರುತ್ತಿರುವ ಮಾಹಿತಿ ಪಡೆದು ಎಚ್ಚೆತ್ತಿರುವ ರಾಜ್ಯ ಸರ್ಕಾರ, ರಾಜ್ಯವನ್ನು ‘ಡ್ರಗ್ಸ್ ಮುಕ್ತ ಕರ್ನಾಟಕ’ ವನ್ನಾಗಿಸುವ ಪಣ ತೊಟ್ಟಿದೆ. ಅಲ್ಲದೆ, ರಾಜ್ಯ ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಕಾರ್ಯಪಡೆಯನ್ನೂ (ಎಎನ್‌ಟಿಎಫ್‌) ರಚಿಸಿದೆ.

ಕರ್ನಾಟಕವೇ ಯಾಕೆ?:

ರಾಜ್ಯವು ಭೂ, ವಾಯು ಹಾಗೂ ಜಲ ಸಾರಿಗೆ ಸೌಲಭ್ಯ ಹೊಂದಿದ್ದು, ಈ ಮೂರೂ ಮಾರ್ಗಗಳ ಮೂಲಕ ರಾಜ್ಯಕ್ಕೆ ಡ್ರಗ್ಸ್ ಕಳ್ಳ ಸಾಗಣೆಯಾಗುತ್ತಿದೆ. ಅಲ್ಲದೆ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಸಂಗ್ರಹಿಸಿ ಹೊರರಾಜ್ಯಗಳಿಗೆ ಸಾಗಿಸುವ ಜಾಲವೂ ಸದ್ದಿಲ್ಲದೆ ಬೆಳೆಯುತ್ತಿದೆ. ಇತ್ತೀಚೆಗೆ ಬೆಂಗಳೂರು ಹೊರಗೂ ಡ್ರಗ್ಸ್ ದಾಸ್ತಾನು ಮಾಡುವ ಪ್ರಯತ್ನ ಪೆಡ್ಲರ್‌ಗಳಿಂದ ನಡೆಯುತ್ತಿದೆ.

2 ಮಾದರಿಯಲ್ಲಿ ಪೂರೈಕೆ:

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದಿಂದ ಭಾರತಕ್ಕೆ ಡ್ರಗ್ಸ್ ಸಾಗಣೆ ಎರಡು ಮಾದರಿಯಲ್ಲಿ ನಡೆಯುತ್ತದೆ. ಮೊದಲನೆಯದು ‘ಗೋಲ್ಡನ್‌ ಕ್ರೆಸೆಂಟ್‌’ ಹಾಗೂ ಎರಡನೆಯದು ‘ಗೋಲ್ಡನ್‌ ಟ್ರಯಾಂಗಲ್‌.’ ಈ ಗೋಲ್ಡನ್‌ ಕ್ರೆಸೆಂಟ್ ಗುಂಪಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಸೇರಿ ಇತರೆ ದೇಶಗಳಿವೆ.

ವಿಶ್ವದಲ್ಲಿ ಅತಿ ಹೆಚ್ಚು ಅಫೀಮು ಪೂರೈಕೆಗೆ ಅಫ್ಘಾನಿಸ್ತಾನ ಕುಖ್ಯಾತಿ ಪಡೆದಿದೆ. ಅಲ್ಲಿಂದ ಟನ್‌ಗಟ್ಟಲೇ ಅಫೀಮು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸುತ್ತಿದೆ. ದೇಶದೊಳಗೆ ನುಸುಳಿದ ಬಳಿಕ ಸಹಜವಾಗಿ ಕರ್ನಾಟಕಕ್ಕೂ ಅಫೀಮು ಮತ್ತು ಹರಡಿದೆ. ಇನ್ನು ಪಾಕಿಸ್ತಾನ ಮೂಲಕ ರಾಜಸ್ಥಾನ ಅಥವಾ ಪಂಜಾಬ್‌ಗೆ ಅಫೀಮು ಸಾಗಣೆಯಾಗುತ್ತದೆ. ಅಲ್ಲಿಂದ ಬಸ್ಸುಗಳಲ್ಲಿ ಬೆಂಗಳೂರಿಗೆ ತರಲಾಗುತ್ತದೆ. ಈ ರೀತಿ ಕಳ್ಳ ಸಾಗಣೆಗೆ ಯತ್ನಿಸಿದ್ದ ಕೆಲವರು ಈಗಾಗಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಇನ್ನು ಗೋಲ್ಡನ್‌ ಟ್ರಯಾಂಗಲ್‌ ಗುಂಪಿನಲ್ಲಿ ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌ ಹಾಗೂ ಥಾಯ್ಲೆಂಡ್‌ನಂಥ ದೇಶಗಳಿವೆ. ಇಲ್ಲಿಂದ ಭಾರತಕ್ಕೆ ಹೈಡ್ರೋ ಗಾಂಜಾ, ಗಾಂಜಾ, ಚರಸ್‌ ಹಾಗೂ ಕೊಕೇನ್‌ ಸಾಗಣೆಯಾಗುತ್ತದೆ. ಇತ್ತೀಚೆಗೆ ಬ್ಯಾಂಕಾಕ್, ಪುಕೆಟ್‌ ಹಾಗೂ ಕೌಲಾಂಪುರಗಳಿಂದ ರಾಜ್ಯಕ್ಕೆ ಡ್ರಗ್ಸ್ ಸಾಗಣೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಫ್ರಿಕಾ ದೇಶಗಳ ಹಾವಳಿ:

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಿಂದ ನೈಸರ್ಗಿಕ ಅಫೀನಿನಂಥ ಡ್ರಗ್ಸ್ ಹರಿದು ಬಂದರೆ, ಆಫ್ರಿಕಾ ದೇಶಗಳು ಸಿಂಥೆಟಿಕ್ ಡ್ರಗ್ಸ್‌ ಪೂರೈಕೆಗೆ ಕುಪ್ರಸಿದ್ಧವಾಗಿವೆ. ನೈಜೀರಿಯಾ, ಐವರಿ ಕೋಸ್ಟ್‌ ಹಾಗೂ ತಾಂಜೇನಿಯಾ ಸೇರಿ ಇತರೆ ದೇಶಗಳ ಹೆಸರು ಈ ಜಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಆಫ್ರಿಕಾ ಪ್ರಜೆಗಳು ಪ್ರವಾಸ, ಬ್ಯುಸಿನೆಸ್ ಹಾಗೂ ಶೈಕ್ಷಣಿಕ ವೀಸಾದಡಿ ರಾಜ್ಯಕ್ಕೆ ಬಂದು ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದಾರೆ. ಈ ರೀತಿ ದಂಧೆಯಲ್ಲಿ ತೊಡಗಿದ 211 ವಿದೇಶಿ ಪೆಡ್ಲರ್‌ಗಳು ಮೂರು ವರ್ಷಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ. ಅಲ್ಲದೆ, 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಗಡೀಪಾರು ಕೂಡ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಂಧ್ರ, ಅಸ್ಸಾಂ ರಾಜ್ಯಗಳು?:

ವಿದೇಶಗಳ ನಂತರ ಅಸ್ಸಾಂ, ತ್ರಿಪುರಾ, ಒಡಿಶಾ ಹಾಗೂ ಆಂಧ್ರಪ್ರದೇಶ ಸೇರಿ ಇತರೆ ರಾಜ್ಯಗಳಿಂದಲೂ ಕರ್ನಾಟಕಕ್ಕೆ ಗಾಂಜಾ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಹಣದಾಸೆ ತೋರಿಸಿ ಕಾರ್ಮಿಕರನ್ನು ಡ್ರಗ್ಸ್ ಮಾಫಿಯಾ ಇದಕ್ಕಾಗಿ ಬಳಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಹೋಟೆಲ್‌, ನಿರ್ಮಾಣ ಹಂತದ ಕಟ್ಟಡಗಳಲ್ಲಿ ದುಡಿಯುವ ಶ್ರಮಿಕರಿಗೆ ಕೈ ತುಂಬ ಹಣ ಕೊಟ್ಟು ಹೊರ ರಾಜ್ಯಗಳಿಂದ ಡ್ರಗ್ಸ್ ತರಿಸುತ್ತಿದ್ದಾರೆ. ಒಡಿಶಾ ಹಾಗೂ ಈಶಾನ್ಯ ರಾಜ್ಯಗಳಿಂದ ಬಹುತೇಕ ರೈಲುಗಳ ಮೂಲಕವೇ ಈ ರೀತಿ ಗಾಂಜಾ ಸಾಗಣೆ ನಡೆದಿದ್ದರೆ, ಆಂಧ್ರಪ್ರದೇಶದಿಂದ ಬಸ್ಸು ಹಾಗೂ ಕಾರುಗಳಲ್ಲಿ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

----

15 ಸಾವಿರ ಕೇಸ್‌, 19 ಸಾವಿರ ಬಂಧನ

ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 15,678 ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದು, 19,197 ಜನ ಬಂಧಿತರಾಗಿದ್ದಾರೆ. ಈ ಆರೋಪಿಗಳಿಂದ 19.308 ಟನ್ ಗಾಂಜಾ ಹಾಗೂ 1.244 ಟನ್ ಸಿಂಥೆಟಿಕ್ ಡ್ರಗ್ಸ್ ಜಪ್ತಿಯಾಗಿದೆ. ಅಲ್ಲದೆ, 211 ವಿದೇಶಿ ಪ್ರಜೆಗಳನ್ನೂ ಈ ಸಂಬಂಧ ಬಂಧಿಸಲಾಗಿದೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇರೆಗೆ 300 ವಿದೇಶಿಯರನ್ನು ಗಡೀಪಾರು ಕೂಡ ಮಾಡಲಾಗಿದೆ. 2025ರಲ್ಲಿ ಬೆಂಗಳೂರಿನಲ್ಲಿ 162 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.