ಸಾರಾಂಶ
ಬೆಂಗಳೂರು : ತನ್ನ ದೇಶದಿಂದ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ನಗರಕ್ಕೆ ಬಂದು ಡ್ರಗ್ಸ್ ದಂಧೆಗಿಳಿದಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ನೈಜೀರಿಯಾ ಪ್ರಜೆ, ಪರಪ್ಪನ ಅಗ್ರಹಾರದ ದೊಡ್ಡನಾಗಮಂಗಲ ಬಳಿಯ ಶ್ರೀನಿಧಿ ಲೇಔಟ್‌ನ ನಿವಾಸಿ ಇನಿಯಂಗ್ ಉನ್ಯಮಿ ಬೋನಿಫೇಸ್ ಬಂಧಿತನಾಗಿದ್ದು, ಆರೋಪಿಯಿಂದ ₹2 ಕೋಟಿ ಮೌಲ್ಯದ 1.577 ಕೇಜಿ ಎಂಡಿಎಂ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಆತನ ಸ್ನೇಹಿತೆ ಬ್ಯೂಟಿ ಪತ್ತೆಗೆ ತನಿಖೆ ಮುಂದುವರೆದಿದೆ. ಹಲವು ದಿನಗಳಿಂದ ನಗರದಲ್ಲಿ ಬೋನಿಫೇಸ್ ಡ್ರಗ್ಸ್ ದಂಧೆಯಲ್ಲಿ ನಿರತನಾಗಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ್ ನೇತೃತ್ವದ ತಂಡವು, ಆತನ ಮನೆ ಮೇಲೆ ದಾಳಿ ನಡೆಸಿ ಮಾಲಿನ ಸಮೇತ ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯೂಟಿ ಬಳಿ ಡ್ರಗ್ಸ್ ಖರೀದಿ: ಆರೋಪಿ ಮೂಲತಃ ನೈಜೀರಿಯಾ ದೇಶದವನಾಗಿದ್ದು, ನಾಲ್ಕು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ. ಮೊದಲು ಕೆಲ ತಿಂಗಳು ಉತ್ತರಪ್ರದೇಶದ ನೋಯ್ಡಾ ನಗರದಲ್ಲಿ ನೆಲೆಸಿದ್ದ ಆತ, ನಂತರ ಬೆಂಗಳೂರಿಗೆ ಬಂದು ಡ್ರಗ್ಸ್ ದಂಧೆಗಿಳಿದಿದ್ದ. ತನ್ನ ಸ್ನೇಹಿತರ ಮೂಲಕ ಆರೋಪಿಗೆ ವಿದೇಶಿ ಮೂಲದ ಮಹಿಳಾ ಪೆಡ್ಲರ್ ಪರಿಚಯವಾಗಿದೆ. ಆಕೆಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಈತ ದುಬಾರಿ ಬೆಲೆ ಮಾರುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ತಾನು ಬ್ಯೂಟಿ ಹೆಸರಿನ ಪೆಡ್ಲರ್‌ನಿಂದ ಡ್ರಗ್ಸ್ ಖರೀದಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ತನಗೆ ಗೊತ್ತಿರುವ ಗ್ರಾಹಕರಿಗೆ ಮಾತ್ರವಷ್ಟೇ ಆರೋಪಿ ಎಂಡಿಎಂಎ ಡ್ರಗ್ಸ್ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.