ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕಾರ್ಮಿಕರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.ಜಾರ್ಖಂಡ್ ಮೂಲದ ಪವನ್ ಯಾದವ್ (55) ಕೊಲೆಯಾದ ಕಾರ್ಮಿಕ. ಸೋಮವಾರ ಸಂಜೆ ಸುಮಾರು 4 ಗಂಟೆಗೆ ಸೀಗೇಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕೊಲೆ ಸಂಬಂಧ ಆರೋಪಿ ಗಣೇಶ್‌ಧರ್ (46) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಘಟನೆ ವಿವರ:ಜಾರ್ಖಂಡ್ ಮೂಲದ ಪವನ್ ಯಾದವ್ ಮತ್ತು ಗಣೇಶ್‌ಧರ್ ಕಳೆದ 2 ವರ್ಷಗಳಿಂದ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲ ದಿನಗಳಿಂದ ಸೀಗೇಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ಕಟ್ಟಡದ ಪಕ್ಕದ ಕಾರ್ಮಿಕರ ಶೆಡ್‌ನಲ್ಲೇ ಇಬ್ಬರೂ ನೆಲೆಸಿದ್ದರು. ಸೋಮವಾರ ಇಬ್ಬರು ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದರು. ಮಧ್ಯಾಹ್ನ ಇಬ್ಬರು ಕಂಠಮಟ ಮದ್ಯ ಸೇವಿಸಿ, ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಚಾಕು ತೆಗೆದು ಎದೆಗೆ ಇರಿದ:ಈ ವೇಳೆ ಇಬ್ಬರು ಕೌಟುಂಬಿಕ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಈ ವೇಳೆ ಏಕಾಏಕಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಪವನ್ ಯಾದವ್, ಗಣೇಶ್‌ಧರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಗಣೇಶ್‌ಧರ್ ಅಲ್ಲೇ ಇದ್ದ ಚಾಕು ತೆಗೆದು ಪವನ್‌ನ ಎದೆ ಹಾಗೂ ಪಕ್ಕೆಲುಬಿಗೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಪವನ್‌ನನ್ನು ಇತರೆ ಕಾರ್ಮಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಪವನ್ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಡುಗೋಡಿ ಪೊಲೀಸರು ಪರಿಶೀಸಿದ್ದಾರೆ. ಘಟನೆ ಸಂಬಂಧ ಗುತ್ತಿಗಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಗಣೇಶ್‌ಧರ್‌ನನ್ನು ಬಂಧಿಸಿದ್ದಾರೆ.(ಸಿಟಿಯಲ್ಲಿ ಕ್ರೈಂ ಅಂತ ಚಾಕು ಫೋಟೋ ಇದೆ)