ಮಾಜಿ ಕಾರ್ಪೋರೆಟರ್‌ಗಳಿಗೆ ಇ.ಡಿ.ಸಂಕಷ್ಟ?

| Published : Jan 10 2025, 01:47 AM IST

ಸಾರಾಂಶ

ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಆರೋಪದ ಮೇರೆಗೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಭ್ರಷ್ಟಾಚಾರ ನಡೆದ ಅವಧಿಯಲ್ಲಿದ್ದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಆರೋಪದ ಮೇರೆಗೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಭ್ರಷ್ಟಾಚಾರ ನಡೆದ ಅವಧಿಯಲ್ಲಿದ್ದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಈ ನಡುವೆ ಅಕ್ರಮ ಸಂಬಂಧ ಇ.ಡಿ. ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿಗೂ, ದಾಳಿ ವೇಳೆ ಲಭ್ಯವಾದ ದಾಖಲೆಗಳ ಮಾಹಿತಿಗೂ ಸಾಕಷ್ಟು ವ್ಯತ್ಯಾಸ ಇದ್ದು, ಈ ಬಗ್ಗೆ ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

2016 ರಿಂದ 2019ರ ಅವಧಿಯಲ್ಲಿ ಕೊಳವೆಬಾವಿ ಕೊರೆಸುವ ಮತ್ತು ಶುದ್ಧ ನೀರಿನ ಘಟಕಗಳ ಸ್ಥಾಪನೆ ವಿಚಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು. ಈ ವಿಚಾರವಾಗಿ ಕಾರ್ಯಾಚರಣೆ ಕೈಗೊಂಡ ಇ.ಡಿ. ಅಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ನಾಲ್ಕು ವಲಯ ಕಚೇರಿಗಳಾದ ಮಹಾದೇವಪುರ, ಬೊಮ್ಮನಹಳ್ಳಿ, ಆರ್‌.ಆರ್‌.ನಗರ, ಕೆಂಗೇರಿ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಪ್ರಮುಖವಾಗಿ ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಕಚೇರಿಯಲ್ಲಿ ಶೋಧ ಕಾರ್ಯ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದರು. ಈ ಮೊದಲೇ ಅವ್ಯವಹಾರ ಕುರಿತು ಮಾಹಿತಿ ಪಡೆದುಕೊಂಡಿದ್ದ ಇ.ಡಿ. ಅಧಿಕಾರಿಗಳು, ದಾಳಿ ನಡೆಸಿದ ವೇಳೆ ಲಭ್ಯವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಸಿಕ್ಕ ಮಾಹಿತಿಗೂ ವ್ಯತ್ಯಾಸ ಇದೆ ಎಂದು ಹೇಳಲಾಗಿದೆ.

ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹದೇವಪುರ, ಯಲಹಂಕ ಸೇರಿದಂತೆ ಇತರೆ ವಿಧಾನಸಭಾ ಕ್ಷೇತ್ರದ 68 ವಾರ್ಡ್‌ಗಳಲ್ಲಿ 9,558 ಬೋರ್‌ವೆಲ್ ಕೊರೆಸಲಾಗಿದ್ದು, ಇದರ ಜೊತೆಗೆ 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದರು. ಆದರೆ, ಒಂದು ಸಾವಿರಕ್ಕೂ ಕಡಿಮೆ ಬೋರ್‌ವೆಲ್‌ ಕೊರೆಸಿ ಬಿಬಿಎಂಪಿ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರು. ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಪಾಲಿಕೆಯ ಸದಸ್ಯರಾಗಿದ್ದವರನ್ನು ಮತ್ತು ಅಧಿಕಾರಿಗಳನ್ನು ವಿಚಾರಣೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ.

ದಾಖಲೆಗಳನ್ನು ಪರಿಶೀಲನೆ ನಡೆಸುವಲ್ಲಿ ಮುಂದಾಗಿರುವ ಇ.ಡಿ. ಅಧಿಕಾರಿಗಳು ಶೀಘ್ರದಲ್ಲಿಯೇ ನೋಟಿಸ್‌ ಜಾರಿಗೊಳಿಸಿ ವಿಚಾರಣೆಗೆ ಕರೆಯಲಿದ್ದಾರೆ. ಅವ್ಯವಹಾರ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ ಎನ್ನಲಾಗಿದೆ.

ಈ ನಡುವೆ, ಅವ್ಯವಹಾರ ನಡೆದಿರುವ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರ ಹೆಸರು ಸೇರಿದಂತೆ ಇತರೆ ಮಾಹಿತಿಯನ್ನು ಪಾಲಿಕೆಯ ಅಧಿಕಾರಿಗಳಿಂದ ಕೇಳಲಾಗಿದೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾದ ಬಳಿಕ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ತಿಳಿದಬಂದಿದೆ.