ಸಾರಾಂಶ
ಮಂಡ್ಯ : ವಿದ್ಯುತ್ ಅವಘಡದಿಂದ ಎಲೆಕ್ಟ್ರಿಕ್ ಅಂಗಡಿ ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ನಗರದ ನೂರಡಿ ರಸ್ತೆಯ ಶ್ರೀಸಪ್ತಗಿರಿ ಎಲೆಕ್ಟ್ರಿಕ್ ಅಂಗಡಿಯಲ್ಲಿ ನಡೆದಿದೆ.
ಘಟನೆಯಲ್ಲಿ ಅಂಗಡಿಯಲ್ಲಿದ್ದ ವೈರ್ ಬಂಡಲ್, ಸ್ವಿಚ್ ಬೋರ್ಡ್, ಪೈಪ್‌ಗಳು, ಗೀಸರ್, ಬಲ್ಪ್‌ಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಾದರಿಯ ಎಲೆಕ್ಟ್ರಿಕ್ ವಸ್ತುಗಳಿಗೆ ಹಾನಿಯಾಗಿದೆ. ಎಲ್ಲಾ ವಸ್ತುಗಳು ಪ್ಲಾಸ್ಟಿಕ್ ಆಗಿದ್ದರಿಂದ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ.
ಸೋಮವಾರ ಎಂದಿನಂತೆ ವ್ಯಾಪಾರ ಮಾಡಿ ರಾತ್ರಿ 8:45 ರ ಸಮಯದಲ್ಲಿ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗಿದ್ದು, ಆ ನಂತರ ಬೆಂಕಿ ಕಾಣಿಸಿಕೊಂಡಿದೆ, ರಾತ್ರಿ 11:15 ರ ಸಮಯದಲ್ಲಿ ದಾರಿ ಹೋಕರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ.
ಮಾಲೀಕರಾದ ಪ್ರಕಾಶ್ ಮತ್ತು ಪೃಥ್ವಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು, ಸುತ್ತಮುತ್ತಲ ಪ್ರದೇಶ ದಟ್ಟ ಹೊಗೆಯಿಂದ ಆವರಿಸಿಕೊಂಡಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿಯ ಜಾಸ್ತಿಯಾಗಿದೆ.
ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾದರೂ ಅಷ್ಟರೊಳಗೆ ಅಂಗಡಿಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಘಟನೆಯಲ್ಲಿ 15 ರಿಂದ 20 ಲಕ್ಷ ರು.ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.