ಗ್ರಾಮದ ಮೇಲುಕೋಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ರವಿಕಿರಣ್ ಅವರು ಎರಡು ಮಳಿಗೆಗಳನ್ನು ಬಾಡಿಗೆ ಪಡೆದು ಕಳೆದ ಹಲವು ವರ್ಷಗಳಿಂದ ಫ್ರಿಜ್ಡ್, ಸೋಫಾ, ಪಾತ್ರೆಗಳು ಸೇರಿದಂತೆ ಲಕ್ಷಾಂತರ ಬೆಳೆಬಾಳುವ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು.
ಪಾಂಡವಪುರ:
ವಿದ್ಯುತ್ ಶಾರ್ಟ್ಕ್ಯೂಟ್ನಿಂದಾಗಿ ಬೆಂಕಿ ತಗುಲಿ ಅಂಗಡಿ ಮಳಿಗೆಯಲ್ಲಿದ್ದ ಗೃಹಬಳಕೆ ಸಾಮಗ್ರಿ, ಪಾತ್ರೆಗಳು ಸಂಪೂರ್ಣ ಸುಟ್ಟುಭಸ್ಮವಾಗಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ನಿವಾಸಿ ರವಿಕಿರಣ್ ಅವರಿಗೆ ಸೇರಿದ ಅಂಗಡಿ ಮಳಿಗೆಯು ಬೆಂಕಿ ಆಹುತಿಯಾಗಿದೆ. ಅಂಗಡಿಯಲ್ಲಿದ್ದ ಗೃಹಬಳಕೆ ಎಲೆಕ್ಟ್ರಿಕ್ ವಸ್ತುಗಳು, ಪಾತ್ರೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟುಭಸ್ಮವಾಗಿ ಸುಮಾರು 25 ರಿಂದ 30 ಲಕ್ಷಕ್ಕೂ ಅಧಿಕ ನಷ್ಟು ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮದ ಮೇಲುಕೋಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ರವಿಕಿರಣ್ ಅವರು ಎರಡು ಮಳಿಗೆಗಳನ್ನು ಬಾಡಿಗೆ ಪಡೆದು ಕಳೆದ ಹಲವು ವರ್ಷಗಳಿಂದ ಫ್ರಿಜ್ಡ್, ಸೋಫಾ, ಪಾತ್ರೆಗಳು ಸೇರಿದಂತೆ ಲಕ್ಷಾಂತರ ಬೆಳೆಬಾಳುವ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು.ದೀಪಾವಳಿ ಹಬ್ಬದ ಅಂಗವಾಗಿ ಭಾನುವಾರ ಸಂಜೆ ಅಂಗಡಿ ವ್ಯಾಪಾರ ಮುಗಿಸಿ ದೇವರಿಗೆ ಪೂಜೆ ಸಲ್ಲಿಸಿ ಮನೆಗೆ ಹೋಗಿದ್ದಾರೆ. ಸೋಮವಾರ ಮುಂಜಾನೆ ಅಂಗಡಿ ಒಳಗೆ ಆಕಸ್ಮಿಕ ಬೆಂಕಿಕಾಣಿಸಿಕೊಂಡಿದೆ. ಅಂಗಡಿಯಿಂದ ಬೆಂಕಿಯ ನರ್ತನ ಕಾಣುತ್ತಿದ್ದಂತೆಯೇ ಸ್ಥಳೀಯರು ತಕ್ಷಣ ಮಾಲೀಕರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ಗೃಹಬಳಕೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಪಕ್ಕದ ಅಂಗಡಿ ಮಳಿಗೆಗೂ ಸಹ ಬೆಂಕಿ ತಗುಲಿ ದಿನಬಳಕೆ ವಸ್ತುಗಳು ಸುಟ್ಟುಹೋಗಿವೆ. ಘಟನೆ ಸಂಬಂಧವಾಗಿ ಅಂಗಡಿ ಮಾಲೀಕ ರವಿಕಿರಣ್ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.