ಕಲೆಯು ಸೃಜನಶೀಲತೆ, ಹೊಸ ಕಲ್ಪನೆಗಳ ಅಭಿವ್ಯಕ್ತಿ. ಇದನ್ನು ಉಳಿಸಬೇಕಾದರೆ ಕಲೆ ಮತ್ತು ಕಲಾವಿದರಿಗೆ ಸಮಾಜ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಕಿರ್ಲೋಸ್ಕರ್‌ ಸಿಸ್ಟಮ್ಸ್‌ ಪ್ರೈ.ಲಿ. ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲೆಯು ಸೃಜನಶೀಲತೆ, ಹೊಸ ಕಲ್ಪನೆಗಳ ಅಭಿವ್ಯಕ್ತಿ. ಇದನ್ನು ಉಳಿಸಬೇಕಾದರೆ ಕಲೆ ಮತ್ತು ಕಲಾವಿದರಿಗೆ ಸಮಾಜ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಕಿರ್ಲೋಸ್ಕರ್‌ ಸಿಸ್ಟಮ್ಸ್‌ ಪ್ರೈ.ಲಿ. ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್‌ ಹೇಳಿದ್ದಾರೆ.

ನಗರದ ಚಿತ್ರಕಲಾ ಪರಿಷತ್‌ ವತಿಯಿಂದ ಪರಿಷತ್‌ ಆವರಣದಲ್ಲಿ ‘ನಮ್ಮ ಆರ್ಟ್‌ ಬೆಂಗಳೂರು’ ರಾಷ್ಟ್ರೀಯ ಕಲಾ ಮೇಳದ ಎರಡನೇ ಆವೃತ್ತಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಕಲಾ ಮೇಳಗಳನ್ನು ಆಯೋಜಿಸಿ ಹೊಸ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದರು.

ಭಾರತೀಯ ವಿದ್ಯಾಭವನ ಅಧ್ಯಕ್ಷ, ಹಿರಿಯ ವಕೀಲ ಕೆ.ಜಿ. ರಾಘವನ್‌ ಮಾತನಾಡಿ, ಜಗತ್ತಿನಾದ್ಯಂತ ಜಾತಿ, ಧರ್ಮ, ಭಾಷೆಗಾಗಿ ಯುದ್ಧಗಳು ನಡೆದರೆ, ವಿಶ್ವವನ್ನು ಒಗ್ಗೂಡಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಕಲೆಯು ಜನರ ನಡುವೆ ಭಾವನಾತ್ಮಕ ಸಂಪರ್ಕವನ್ನು ಕಲ್ಪಿಸುತ್ತದೆ, ಹೃದಯಗಳನ್ನು ಬೆಸೆಯುತ್ತದೆ, ಸಹಿಷ್ಣುತೆಯ ಮನೋಭಾವವನ್ನು ಸೃಷ್ಟಿಸುತ್ತದೆ. ಅದಕ್ಕಾಗಿ ಕಲಾ ಲೋಕ ಇನ್ನಷ್ಟು ಸಮೃದ್ಧವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್. ಶಂಕರ್‌ ಮಾತನಾಡಿ, ಪರಿಷತ್‌ ಆಯೋಜಿಸುತ್ತಿರುವ ‘ಚಿತ್ರಸಂತೆ’ಗೆ ಸರ್ಕಾರ ಸಹಕಾರ ನೀಡುತ್ತಿದೆ. ಆದರೆ ‘ನಮ್ಮ ಆರ್ಟ್‌ ಬೆಂಗಳೂರು’ ಕಾರ್ಯಕ್ರಮವನ್ನು ಪರಿಷತ್‌ ವತಿಯಿಂದಲೇ ಯೋಜಿಸಲಾಗಿದೆ. ಈ ಬಾರಿ ಕಲಾಕೃತಿಗಳ ಪ್ರದರ್ಶನಕ್ಕೆ ಪರಿಷತ್‌ ಆವರಣದಲ್ಲಿ ಶಾಶ್ವತ ರಚನೆಗಳನ್ನು ಮಾಡಲಾಗಿದೆ ಎಂದರು.

ಚೆನ್ನೈನ ಕಲಾ ಇತಿಹಾಸಕಾರ್ತಿ ಡಾ.ಅಶ್ರಫಿ ಎಸ್‌. ಭಗತ್‌, ಮುಂಬೈ ಲ್ಯುಮಿನಾ ಲರ್ನಿಂಗ್‌ನ ರಾಹುಲ್‌ ಬಸ್ವಾನಿ, ಹಿರಿಯ ಕಲಾವಿದೆ ಲೀನಾ ವಿನ್ಸೆಂಟ್‌, ಚಿತ್ರಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಶಶಿಧರ ರಾವ್‌, ಸಂಚಾಲಕ ಎಸ್‌.ಎ. ವಿಮಲನಾಥನ್‌ ಮತ್ತಿತರರಿದ್ದರು.

ಲಕ್ಷಾಂತರ ರು. ಬೆಲೆಯ ಕಲಾಕೃತಿಗಳು:

ಈ ಕಲಾಮೇಳದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 100ಕ್ಕೂ ಅಧಿಕ ಹಿರಿ- ಕಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಕೆಲವು ಸಾವಿರದಿಂದ ಹಿಡಿದು ಲಕ್ಷಾಂತರ ರು. ಬೆಲೆಬಾಳುವ ಕಲಾಕೃತಿಗಳೂ ಇಲ್ಲಿವೆ. ದೆಹಲಿಯ ಹಿರಿಯ ಕಲಾವಿದ ಇಂದ್ರಜೀತ್‌ ಗ್ರೋವರ್‌ ಅವರು ಬರೋಬ್ಬರಿ ಏಳೂವರೆ ಲಕ್ಷ ರು. ಮೌಲ್ಯದ ಕಲಾಕೃತಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ನಡೆದ ಕಲಾಮೇಳದಲ್ಲಿ ನಾಲ್ಕೂವರೆ ಲಕ್ಷ ರು.ಗೆ ಕಲಾಕೃತಿ ಮಾರಾಟವಾಗಿದ್ದನ್ನು ಅವರು ಸ್ಮರಿಸಿದರು.