ಕೋಟ್ಯಂತರ ರು.ಲೂಟಿ ಆರೋಪ : ಬಿಬಿಎಂಪಿ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಅಂತ್ಯ

| Published : Jan 09 2025, 01:49 AM IST / Updated: Jan 09 2025, 05:15 AM IST

ಸಾರಾಂಶ

ಕೊಳವೆಬಾವಿ ಕೊರೆಸಿರುವುದಾಗಿ ದಾಖಲೆ ಸೃಷ್ಟಿಸಿ ಹಣ ಲೂಟಿ ಆರೋಪ ಸಂಬಂಧ ಬಿಬಿಎಂಪಿ ಕಚೇರಿ ಮೇಲೆ ಇ.ಡಿ. ದಾಳಿ ಅಂತ್ಯವಾಗಿದೆ.

 ಬೆಂಗಳೂರು : ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರುಪಾಯಿ ಲೂಟಿ ಹೊಡೆದಿರುವ ಆರೋಪದ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳ ಮೇಲಿನ ದಾಳಿ ಪ್ರಕ್ರಿಯೆಯನ್ನು ಅಂತ್ಯಗೊಳಿಸಿದ್ದಾರೆ.

ಎರಡನೇ ದಿನವಾದ ಬುಧವಾರದಂದು ಇ.ಡಿ. ಅಧಿಕಾರಿಗಳು ದಾಳಿಯನ್ನು ಮುಗಿಸಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಡಾ। ಬಿ.ಎಸ್‌.ಪ್ರಹ್ಲಾದ್‌ ಕಚೇರಿಯನ್ನು ಸಂಪೂರ್ಣ ವಶಕ್ಕೆ ಪಡೆದು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದರು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ತೆರಳಿದ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವ ಸಂಬಂಧ 2016 ರಿಂದ 2019ರ ಅವಧಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ. ದಾಳಿ ನಡೆಸಿದೆ. ಮಂಗಳವಾರ ಬೆಳಗ್ಗೆ ಆರಂಭಗೊಂಡ ದಾಳಿ ಪ್ರಕ್ರಿಯೆಯುವ ಬುಧವಾರ ಸಂಜೆಯವರೆಗೆ ನಡೆಯಿತು. ಇ.ಡಿ. ಅಧಿಕಾರಿಗಳು ತಮಗೆ ಬೇಕಾದ ಅಗತ್ಯ ದಾಖಲೆಗಳನ್ನು ಕೊಂಡೊಯ್ಯಲಾಗಿದ್ದು ಪರಿಶೀಲನೆ ನಡೆಸಿ ಮುಂದಿನ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಈ ನಡುವೆ, ಬುಧವಾರ ಇ.ಡಿ. ಅಧಿಕಾರಿಗಳು ದಾಳಿ ಮುಂದುವರಿಸಿ ಅಗತ್ಯ ಮಾಹಿತಿಗಳನ್ನು ಕ್ರೋಢೀಕರಿಸಿದ್ದಾರೆ. ಅಕ್ರಮ ನಡೆದಿದ್ದ ವೇಳೆ ಬ್ಯಾಂಕ್‌ನ ವಹಿವಾಟಿನ ಮಾಹಿತಿಯನ್ನು ಸಹ ಪಡೆದುಕೊಳ್ಳಲಾಗಿದೆ. ಪ್ರಹ್ಲಾದ್‌ ಸೇರಿದಂತೆ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

2016-19ರ ಅವಧಿಯಲ್ಲಿ ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹದೇವಪುರ, ಯಲಹಂಕ ಸೇರಿದಂತೆ ಇತರೆ ವಿಧಾನಸಭಾ ಕ್ಷೇತ್ರದ 68 ವಾರ್ಡ್‌ಗಳಲ್ಲಿ 9,558 ಬೋರ್‌ವೆಲ್ ಕೊರೆಸಲಾಗಿದ್ದು, ಇದರ ಜೊತೆಗೆ 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದಾಖಲೆ ಸೃಷ್ಟಿಸಿದ್ದರು. ಆದರೆ, ಒಂದು ಸಾವಿರಕ್ಕೂ ಕಡಿಮೆ ಬೋರ್‌ವೆಲ್‌ ಕೊರೆಸಿ ಬಿಬಿಎಂಪಿ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರು. ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು. ಯೋಜನೆಯಲ್ಲಿ ₹400 ಕೋಟಿಗಿಂತ ಅಧಿಕ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಮೇರೆಗೆ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.