ಸಾರಾಂಶ
ಬೆಂಗಳೂರು : ಸ್ನೇಹಿತರ ಜತೆ ರಸ್ತೆ ದಾಟುವಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟು, ಮತ್ತೊಬ್ಬವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಏರ್‌ಪೋರ್ಟ್ ರಸ್ತೆಯ ಎಂವಿಐಟಿ ಜಂಕ್ಷನ್ ಬಳಿ ನಡೆದಿದೆ.
ಕಲಬುರಗಿ ಮೂಲದ ಕಿರಣ್(19) ಮೃತ ವಿದ್ಯಾರ್ಥಿ. ಚೇತನ್(19) ಗಾಯಗೊಂಡಿರುವ ವಿದ್ಯಾರ್ಥಿ. ಈ ಸಂಬಂಧ ದ್ವಿಚಕ್ರ ವಾಹನ ಸವಾರ ವಿಜಯ್(25) ಎಂಬಾತನನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಮೃತ ಕಿರಣ್ ಯಲಹಂಕದ ಎಂವಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ರಾತ್ರಿ ಐವರು ಸ್ನೇಹಿತರು ಹಾಸ್ಟೆಲ್ ಸಮೀಪದ ಬರ್ಗರ್ ಸೆಂಟರ್‌ಗೆ ತೆರಳಿ ಬರ್ಗರ್ ತಿಂದು ಬಳಿಕ ಹಾಸ್ಟೆಲ್‌ಗೆ ವಾಪಾಸ್ಸಾಗಲು ರಸ್ತೆ ವಿಭಜಕ ದಾಟುವಾಗ ಏರ್‌ಪೋರ್ಟ್ ರಸ್ತೆ ಕಡೆಯಿಂದ ನಗರದ ಕಡೆಗೆ ವೇಗವಾಗಿ ಬಂದ ದ್ವಿಚಕ್ರ ವಾಹನ, ಏಕಾಏಕಿ ಕಿರಣ್ ಹಾಗೂ ಚೇತನ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಿರಣ್ ಮತ್ತು ಚೇತನ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕಿರಣ್ ಮೃತಪಟ್ಟಿದ್ದಾರೆ. ಚೇತನ್ ಕಾಲಿಗೆ ಗಂಭೀರ ಪೆಟ್ಟುಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಪಘಾತ ಎಸೆಗಿದ ದ್ವಿಚಕ್ರ ವಾಹನ ಸವಾರ ವಿಜಯ್‌ಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾನೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.