ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಉಲ್ಲಾಳ ಉಪನಗರದಲ್ಲಿನ ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಪಶ್ಚಿಮ ಘಟಕದ ಆವರಣದಲ್ಲಿರುವ ಶಸ್ತ್ರಗಾರಕ್ಕೆ ಅತಿಕ್ರಮ ಪ್ರವೇಶ ಮಾಡಿ ಕರ್ತವ್ಯ ನಿರತ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಸುಮಾರು 60-70 ಮಂದಿ ಅಪರಿಚಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಸಿಎಆರ್ ಪಶ್ಚಿಮ ಘಟಕದ ಕಾನ್‌ಸ್ಟೇಬಲ್ ರುದ್ರೇಶ್ ನಾಯ್ಕ್ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:ಸಿಎಆರ್ ಕಾನ್‌ಸ್ಟೇಟೇಬಲ್ ರುದ್ರೇಶ್ ಅವರು ಉಲ್ಲಾಳ ಉಪನಗರದ ಸಿಎಆರ್ ಪಶ್ಚಿಮ ಘಟಕದ ಶಸ್ತ್ರಗಾರದಲ್ಲಿ ಫೆ.8ರಂದು ಬೆಳಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಈ ವೇಳೆ ಅಧಿಕಾರಿಗಳು ನಿಯಂತ್ರಣ ಕೊಠಡಿಯ ಪಕ್ಕದ ಶಸ್ತ್ರಗಾರದ ಬಳಿ ರುದ್ರೇಶ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಸುಮಾರು 15-20 ಮಂದಿ ಅಪರಿಚಿತರು ಏಕಾಏಕಿ ಶಸ್ತ್ರಗಾರಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ‘ಈಗ ಜಾಗ ನಮಗೆ ಸೇರಿದ್ದು, ಈ ಕೂಡಲೇ ನೀವು ಜಾಗ ಖಾಲಿ ಮಾಡಬೇಕು’ ಎಂದು ದರ್ಪದಿಂದ ಏರುದನಿಯಲ್ಲಿ ಹೇಳಿದ್ದಾರೆ.
ಸಮವಸ್ತ್ರ ಹಿಡಿದು ಕರ್ತವ್ಯಕ್ಕೆ ಅಡ್ಡಿಆಗ ರುದ್ರೇಶ್ ಅವರು ‘ನಮ್ಮ ಹಿರಿಯ ಅಧಿಕಾರಿಗಳ ಜತೆಗೆ ಮಾತನಾಡಿ. ನನ್ನ ಜತೆ ಏಕೆ ದರ್ಪದಿಂದ ಮಾತನಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಆಗ ಆ ಅಪರಿಚಿತರು ರುದ್ರೇಶ್ ಅವರ ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ‘ಈ ಸ್ವತ್ತು ಇಂದಿನಿಂದ ನಮಗೆ ಸೇರಿದ್ದು. ಈ ಸ್ವತ್ತಿನ ವಿಚಾರದಲ್ಲಿ ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ.ಸ್ಥಳದಲ್ಲಿ ಜೆಸಿಬಿ ಯಂತ್ರ, ನೀರಿನ ಟ್ಯಾಂಕರ್
ಈ ವೇಳೆ ರುದ್ರೇಶ್ ಶಸ್ತ್ರಗಾರದಿಂದ ಹೊರಗೆ ಬಂದಾಗ, ಅಲ್ಲಿ ಸುಮಾರು 60 ಮಂದಿ ಅಪರಿಚಿತರು ಗುಂಪು ಗೂಡಿದ್ದು, ‘ಈ ಜಾಗದಲ್ಲಿ ಇದ್ದರೆ ಹಲ್ಲೆ ಮಾಡುವುದಾಗಿ’ ಬೆದರಿಸಿದ್ದಾರೆ. ಈ ಅಪರಿಚಿತರು ನಾಲ್ಕು ಜೆಸಿಬಿ ಯಂತ್ರಗಳು, ಎರಡು ಕ್ಯಾಂಟರ್, ಒಂದು ಲಾರಿ, ಒಂದು ನೀರಿನ ಟ್ಯಾಂಕರ್ ಜತೆಗೆ ಬಂದಿದ್ದರು. ಶಸ್ತ್ರಗಾರಕ್ಕೆ ಅತಿಕ್ರಮ ಪ್ರವೇಶ, ಮಾಡಿ ನನ್ನ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರುದ್ರೇಶ್ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿವಾದಿತ ಜಾಗದಲ್ಲಿ ಶಸ್ತ್ರಗಾರ?ಉಲ್ಲಾಳ ಉಪನಗರದಲ್ಲಿರುವ ಪಶ್ಚಿಮ ಸಿಎಆರ್ ಆವರಣದಲ್ಲಿರುವ ಶಸ್ತ್ರಗಾರ ವಿವಾದಿತ ಸ್ಥಳದಲ್ಲಿದೆ. ಈ ಜಾಗದ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿದೆ. ಇತ್ತೀಚೆಗೆ ಹೈಕೋರ್ಟ್ ಆರೋಪಿಗಳ ಪರವಾಗಿ ಆದೇಶ ನೀಡಿದೆ ಎನ್ನಲಾಗಿದೆ. ಹೀಗಾಗಿ ಆರೋಪಿಗಳು ಶಸ್ತ್ರಗಾರಕ್ಕೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
)
;Resize=(128,128))
;Resize=(128,128))
;Resize=(128,128))