ಸಾರಾಂಶ
ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿನನ್ನು ಕಾಯುವುದೇ ಆತನ ಗನ್ ಮ್ಯಾನ್‌ಗಳಿಗೆ ಭಾರಿ ತಲೆನೋವಾಗಿ ಪರಿಣಿಸಿದೆ ಎಂದು ತಿಳಿದು ಬಂದಿದೆ.
ಈ ಹಗರದಣಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀಕಿ ಭದ್ರತೆಗೆ ಗನ್ ಮ್ಯಾನ್‌ಗಳನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ. ಅಲ್ಲದೆ ಜಯನಗರದಲ್ಲಿರುವ ಆತನ ಮನೆಗೆ ಸಹ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪಾಳಿಯ ಮೇರೆಗೆ ದಿನದ 24 ತಾಸು ಶ್ರೀಕಿಗೆ ಇಬ್ಬರು ಪೊಲೀಸರು ಭದ್ರತೆಯಲ್ಲಿರುತ್ತಾರೆ. ಆದರೆ ಶ್ರೀಕಿಯನ್ನು ಕಾಯೋದೆ ಅವರಿಗೆ ತಲೆನೋವಾಗಿದೆ ಎನ್ನಲಾಗಿದೆ.
ಮನೆಯಿಂದ ಎಲ್ಲಿಗೆ ಹೋದರೂ ಶ್ರೀಕಿಯನ್ನು ಗನ್ ಮ್ಯಾನ್ ಹಿಂಬಾಲಿಸಬೇಕಿದೆ. ಆದರೆ ಕೆಲವು ಬಾರಿ ಗನ್ ಮ್ಯಾನ್ ದಿಕ್ಕು ತಪ್ಪಿಸಿ ಶ್ರೀಕಿ ಓಡಾಡುತ್ತಾನೆ. ಸುರಕ್ಷತೆ ಬಗ್ಗೆ ಆತನಿಗೆ ಹೇಳಿದರೂ ಸಹ ಕೇಳುವುದಿಲ್ಲ ಎಂದು ಮೂಲಗಳು ಹೇಳಿವೆ.
ಕಳೆದ ಜನವರಿಯಲ್ಲಿ ರಾಜ್ಯ ಗುಪ್ತದಳದ ಶಿಫಾರಸಿನ ಮೇರೆಗೆ ಶ್ರೀಕಿ ಭದ್ರತೆಗೆ ಗನ್ ಮ್ಯಾನ್ ನಿಯೋಜಿಸಲಾಗಿದೆ. ಆತನ ಮೇಲೆ ನಿಗಾವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.