ಬೆಂಗಳೂರು : ನಮ್ಮ ಮೆಟ್ರೋ ಹಳಿಯ ಮೇಲೆ ವಾಯು ಪಡೆ ಮಾಜಿ ಸಿಬ್ಬಂದಿ ಆತ್ಮಹತ್ಯೆ ಯತ್ನ

| Published : Jan 21 2025, 01:33 AM IST / Updated: Jan 21 2025, 04:28 AM IST

ಸಾರಾಂಶ

ನಮ್ಮ ಮೆಟ್ರೋ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಳ್ಳಲು ಮತ್ತೊಬ್ಯ ವ್ಯಕ್ತಿ ಯತ್ನಿಸಿದ್ದಾನೆ. ವಾಯು ಪಡೆದ ಮಾಜಿ ನೌಕರ ಆತ್ಮಹತ್ಯೆಗೆ ಯತ್ನಿಸಿದ್ದು, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ್ದಾನೆ.

 ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಾಯುಪಡೆ ನಿವೃತ್ತ ಸಾರ್ಜೆಂಟ್‌ವೊಬ್ಬರು ಸೋಮವಾರ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ಹಳಿಗೆ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ. ಘಟನೆಯಿಂದ 40 ನಿಮಿಷಕ್ಕೂ ಹೆಚ್ಚಿನ ಕಾಲ ಮೆಟ್ರೋ ಸೇವೆ ವ್ಯತ್ಯಯವಾಗಿ ಪ್ರಯಾಣಿಕರು ತೊಂದರೆಗೆ ಒಳಗಾದರು.

ಜಾಲಹಳ್ಳಿ ನಿವಾಸಿ ಅನಿಲ್‌ಕುಮಾರ್‌ ಪಾಂಡೆ (49) ಆತ್ಮಹತ್ಯೆಗೆ ಯತ್ನಿಸಿದವರು. ಬೆಳಗ್ಗೆ 10.23ರ ಸುಮಾರಿಗೆ ನಿಲ್ದಾಣಕ್ಕೆ ಬಂದ ಪಾಂಡೆ ರೈಲು ಬರುವ ವೇಳೆಗೆ ಕೆಳಗೆ ಇಳಿದು ಹಳಿಯಲ್ಲಿ ಮಲಗಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ಸುಮಿತ್ರಾ ಅವರು ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಂ ಬಂದ್‌ ಮಾಡಿ ರೈಲಿಗೆ ವಿದ್ಯುತ್‌ ಪೂರೈಕೆ ನಿಲ್ಲಿಸಿದ್ದಾರೆ. ಇದರಿಂದ ಪಾಂಡೆ ರೈಲಿನ ಕೆಳಗೆ ಸಿಲುಕಿದ್ದರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಈ ಘಟನೆಯಿಂದ ಹಸಿರು ಮಾರ್ಗದ ಮೆಟ್ರೋ ರೈಲುಗಳ ಓಡಾಟ ಕೆಲ ಕಾಲ ವ್ಯತ್ಯಯ ಆಗಿತ್ತು. ಈ ಮಾರ್ಗದಲ್ಲಿ 10.25 ರಿಂದ 10.50ರವರೆಗೆ ಮಾದಾವರ ಮೆಟ್ರೋ ನಿಲ್ದಾಣದ ಬದಲಾಗಿ ಯಶವಂತಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್‌ ನಡುವೆ ನಾಲ್ಕು ಲೂಪ್‌ ರೈಲುಗಳು ಸಂಚರಿಸಿದವು. ಬಳಿಕ ಎಂದಿನಂತೆ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

2ನೇ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ ಅನಿಲ್‌ಕುಮಾರ್‌

ಉತ್ತರಪ್ರದೇಶ ಮೂಲದ ಅನಿಲ್‌ಕುಮಾರ್‌ ಪಾಂಡೆ ವಾಯುಪಡೆಯಲ್ಲಿ ಸಾರ್ಜೆಂಟ್‌ ಆಗಿ 2010ರಲ್ಲಿ ನಿವೃತ್ತಿ ಪಡೆದಿದ್ದಾರೆ. ಮಾನಸಿಕ ಖಿನ್ನತೆ ಒಬ್ಸೆಶನ್‌ ಕಂಪಲ್ಸಿವ್‌ ಡಿಸ್‌ಆರ್ಡರ್‌ನಿಂದ (ಒಸಿಡಿ) ನಿಂದ ಬಳಲುತ್ತಿದ್ದಾರೆ. ಕಳೆದ ವಾರವೂ ಮನೆಯಲ್ಲಿ ಕೈ ನರ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿ ಆರು ದಿನ ಚಿಕಿತ್ಸೆ ಪಡೆದು ಬಿಡುಗಡೆಯಾಗಿ ಮನೆಗೆ ಬಂದಿದ್ದರು. ಇದಾಗಿ ಎರಡೇ ದಿನಕ್ಕೆ ಮೆಟ್ರೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಲ್‌ಗೆ ₹5 ಸಾವಿರ ದಂಡ

ಘಟನೆ ಬಳಿಕ ಪತ್ನಿ ಸುನೀತಾ ಪಾಂಡೆ ಅವರನ್ನು ಕರೆಸಿ ವಿಚಾರಣೆ ನಡೆಸಲಾಯಿತು. ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಅವರಿಂದ ₹5 ಸಾವಿರ ದಂಡ ವಿಧಿಸಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ಸಿಪಿಆರ್‌ಒ ಯಶವಂತ್‌ ಚೌಹಾಣ್‌, ಮೆಟ್ರೋದಲ್ಲಿ ಪ್ರಯಾಣಿಕರ ಸುರಕ್ಷತೆ, ಆತ್ಮಹತ್ಯೆ ತಡೆಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಹಂತ ಹಂತವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು.