ಗ್ಯಾಸ್‌ ಸಿಲಿಂಡರ್‌ ಗೋದಾಮಿನಲ್ಲಿ ಸ್ಫೋಟ: ಕಾರ್ಮಿಕರಿಬ್ಬರಿಗೆ ಗಾಯ

| Published : Mar 26 2024, 06:14 PM IST

ಸಾರಾಂಶ

ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಗ್ಯಾಸ್‌ ಸೋರಿಕೆಯಾಗಿ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಗ್ಯಾಸ್‌ ಸೋರಿಕೆಯಾಗಿ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಅಸ್ಸಾಂ ಮೂಲದ ರಾಮ್‌ ಪ್ರಧಾನ್‌ (29) ಮತ್ತು ಅರುಣಾಚಲಪ್ರದೇಶದ ಪರಶುರಾಮ್‌ (26) ಗಾಯಗೊಂಡವರು. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಮಾವಳ್ಳಿ ಕುಂಬಿಗಲ್‌ ರಸ್ತೆಯಲ್ಲಿ ಸತೀಶ್‌ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡುಗೆ ಅನಿಲ್‌ ಸಿಲಿಂಡರ್‌ ವಿತರಕರಾಗಿರುವ ಸತೀಶ್‌ ಗೋದಾಮಿನಲ್ಲಿ ಗ್ಯಾಸ್‌ ಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ರಾಮ್‌ ಪ್ರಧಾನ್‌ ಮತ್ತು ಪರಶುರಾಮ್‌ ಅವರನ್ನು ಗೋದಾಮು ನೋಡಿಕೊಳ್ಳುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ಗೋದಾಮಿನಲ್ಲಿ ಸುಮಾರು 60 ಅಡುಗೆ ಅನಿಲ ತುಂಬಿದ ಸಿಲಿಂಡರ್‌ಗಳು ಹಾಗೂ ಸುಮಾರು 200 ಖಾಲಿ ಸಿಲಿಂಡರ್‌ಗಳು ಇದ್ದವು. ಬೆಳಗ್ಗೆ 8.30ರ ಸುಮಾರಿಗೆ ಗ್ಯಾಸ್‌ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ.

ಸ್ಫೋಟದ ವೇಳೆ ಗೋದಾಮಿನಲ್ಲಿ ಇದ್ದ ಪ್ರಧಾನ್‌ ಮತ್ತು ಪರಶುರಾಮ್‌ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳೀಯರೇ ಗೋದಾಮಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ.

ಸಿಲಿಂಡರ್‌ ಸ್ಫೋಟದಿಂದ ಅಕ್ಕಪಕ್ಕದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಜನವಸತಿ ಪ್ರದೇಶದಲ್ಲಿ ಗೋದಾಮು ತೆರೆಯಲು ಅನುಮತಿ ಇತ್ತೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.