ಸಾರಾಂಶ
ಬೆಂಗಳೂರು : ಡಾಬಾದಲ್ಲಿ ಸ್ನೇಹಿತರ ಜತೆಗೆ ಊಟ ಮಾಡಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ಬಿ.ಟೆಕ್ ವಿದ್ಯಾರ್ಥಿಯನ್ನು ಮಾರ್ಗ ಮಧ್ಯೆ ತಡೆದು ಬೆದರಿಸಿ ದರೋಡೆ ಮಾಡಿದ್ದ ರೌಡಿ ಶೀಟರ್ ಸೇರಿ ಆರು ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗೋಪಿಚಂದ್, ತೇಜ್‌ದೀಪ್, ಗಂಗಮ್ಮನಗುಡಿ ರೌಡಿ ಶೀಟರ್ ಶರತ್, ಸಹಚರರಾದ ಮಂಜುನಾಥ್, ಚೇತನ್‌ಗೌಡ, ಚೇತನ್ ಕುಮಾರ್ ಬಂಧಿತರು. ಆರೋಪಿಗಳಿಂದ ₹18,500, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ, ಎರಡು ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ, ಕಾರು, ವಿವಿಧ ಕಂಪನಿಗಳ ಆರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಜೂ.2ರಂದು ರಾಜಾನುಕುಂಟೆಯ ಖಾಸಗಿ ವಿಶ್ವವಿದ್ಯಾಲಯದ ಬಿಟೆಕ್ ವಿದ್ಯಾರ್ಥಿ ಇಟಗಲ್‌ಪುರ ನಿವಾಸಿ ವಿಘ್ನೇಶ್(20) ಎಂಬುವವನ್ನು ಬೆದರಿಸಿ ದರೋಡೆ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿ ರೌಡಿ ಶೀಟರ್ ತಲೆಮರೆಸಿಕೊಂಡಿದ್ದಾನೆ.
ಏನಿದು ಪ್ರಕರಣ?: ದೂರುದಾರ ವಿದ್ಯಾರ್ಥಿ ವಿಘ್ನೇಶ್ ಆಂಧ್ರಪ್ರದೇಶ ಮೂಲದವನು. ರಾಜಾನಕುಂಟೆಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಜೂ.2ರಂದು ಮಧ್ಯಾಹ್ನ ಇಟಗಲ್‌ಪುರದ ರೂಮ್‌ನಲ್ಲಿ ಇದ್ದ. ಈ ವೇಳೆ ಸಹಪಾಠಿಗಳಾದ ಗೋಪಿಚಂದ್ ಮತ್ತು ತೇಜ್‌ದೀಪ್ ರೂಮ್ ಬಳಿ ಬಂದು ಬನ್ನೇರುಘಟ್ಟದ ಬಂದೂಸ್ ಡಾಬಾಗೆ ಊಟಕ್ಕೆ ಹೋಗೋಣ ಎಂದು ಕರೆದಿದ್ದಾರೆ. ಅದರಂತೆ ವಿಘ್ನೇಶ್ ಮತ್ತು ಆತನ ಸ್ನೇಹಿತ ಗಣೇಶ್ ಒಂದು ದ್ವಿಚಕ್ರ ವಾಹನದಲ್ಲಿ ಹಾಗೂ ಗೋಪಿಚಂದ್ ಮತ್ತು ತೇಜ್‌ದೀಪ್ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಡಾಬಾಗೆ ಊಟಕ್ಕೆ ತೆರಳಿದ್ದಾರೆ. ಊಟ ಮುಗಿಸಿಕೊಂಡು ಮಧ್ಯಾಹ್ನ 2.15ಕ್ಕೆ ಸೋಲದೇವನಹಳ್ಳಿ ಕಡೆಯಿಂದ ರಾಜಾನುಕುಂಟೆ ಕಡೆಗೆ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಂಎಫ್ ನಂದಿನಿ ಡ್ಯಾನಿಶ್ ಫಾರಂ ಬಳಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ವಿಘ್ನೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ.
ಬೈಕ್‌ನಲ್ಲಿ ಗಾಂಜಾ ಇರಿಸಿ ವಿಡಿಯೋ
ವಿಘ್ನೇಶ್ ಪ್ರಶ್ನೆ ಮಾಡಿದಾಗ, ನಿಮ್ಮ ಸ್ನೇಹಿತರಾದ ತೇಜ್‌ದೀಪ್ ಮತ್ತು ಗೋಪಿಚಂದ್ ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಕರೆಸು ಎಂದು ಹೇಳಿದ್ದಾರೆ. ಅಷ್ಟರಲ್ಲಿ ಆಟೋದಲ್ಲಿ ಬಂದ ಇಬ್ಬರು ಏಕಾಏಕಿ ತಮ್ಮ ಬಳಿಯಿಂದ ಗಾಂಜಾ ಪೊಟ್ಟಣವನ್ನು ತೆಗೆದು ವಿಘ್ನೇಶ್ ದ್ವಿಚಕ್ರ ವಾಹನದಲ್ಲಿ ಇರಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಗಾಂಜಾ ಸೇವಿಸಲು ಇಲ್ಲಿಗೆ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಕಾರಿನಲ್ಲಿ ಬಂದ ಇಬ್ಬರು ನಾವು ಪೊಲೀಸರು ಎಂದು ಗಾಂಜಾ ಪೊಟ್ಟಣವನ್ನು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಿಘ್ನೇಶ್‌ನ ಹಾಲ್‌ಟಿಕೆಟ್‌ನ ಫೋಟೋ ಸೆರೆ ಹಿಡಿದಿದ್ದಾರೆ. ಬಳಿಕ ವಿಘ್ನೇಶ್ ಬಳಿ ಇದ್ದ ₹20 ಸಾವಿರ ಮತ್ತು 12 ಗ್ರಾಂ ಚಿನ್ನದ ಸರ ಕಿತ್ತುಕೊಂಡು, ಗಾಂಜಾದ ವಿಡಿಯೋ ಡಿಲೀಡ್ ಮಾಡಬೇಕಾದರೆ, ₹10 ಲಕ್ಷ ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಬಳಿಕ ವಿಘ್ನೇಶ್ ₹7 ಲಕ್ಷ ನೀಡಲು ಒಪ್ಪಿಕೊಂಡಿದ್ದಾನೆ.
ಬೈಕ್ ಅಡಮಾನ ಇರಿಸಿ ₹50 ಸಾವಿರ ಕೊಟ್ಟ
ಆರೋಪಿಗಳು ವಿಘ್ನೇಶ್‌ನನ್ನು ರಾಜಾನುಕುಂಟೆಗೆ ಕರೆದೊಯ್ದು ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನವನ್ನು ಅಡಮಾನ ಇರಿಸಿ ₹50 ಸಾವಿರ ಪಡೆದುಕೊಂಡಿದ್ದಾರೆ. ಉಳಿದ ಹಣವನ್ನು ಎರಡು ದಿನಗಳಲ್ಲಿ ಕೊಡಬೇಕು. ಇಲ್ಲವಾದರೆ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಬೆದರಿಕೆ ಪರಾರಿಯಾಗಿದ್ದಾರೆ. ಈ ಸಂಬಂಧ ವಿಘ್ನೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಓರ್ವ ರೌಡಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ನೇಹಿತರೇ ಸಂಚುಕೋರರು!
ಬಂಧಿತ ಆರು ಮಂದಿ ಆರೋಪಿಗಳ ಪೈಕಿ ತೇಜ್‌ದೀಪ್ ಮತ್ತು ಗೋಪಿಚಂದ್ ದೂರುದಾರ ವಿಘ್ನೇಶ್ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲೇ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ವಿಘ್ನೇಶ್‌ನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ಈ ಇಬ್ಬರು ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಸಂಚು ರೂಪಿಸಿ ದರೋಡೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.