ಫೇಸ್ಬುಕ್‌ ಫ್ರೆಂಡಿಂದ ವರ್ತೂರು ಪ್ರಕಾಶ್‌ಗೆ ಈಗ ಬಂಧನ ಭೀತಿ - ವಿಚಾರಣೆಗೆ ಮಾಜಿ ಸಚಿವ ಗೈರು

| Published : Dec 24 2024, 04:35 AM IST

Varthur prakash

ಸಾರಾಂಶ

ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಅವರ ಫೇಸ್‌ಬುಕ್‌ ಗೆಳತಿ ಶ್ವೇತಾಗೌಡ ಎಂಬಾಕೆ ಸಂಕಷ್ಟ ತಂದಿದ್ದು, ಚಿನ್ನದ ವ್ಯಾಪಾರಿಗೆ ಆಕೆ ಕೋಟ್ಯಂತರ ರು. ವಂಚನೆ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ.

ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಅವರ ಫೇಸ್‌ಬುಕ್‌ ಗೆಳತಿ ಶ್ವೇತಾಗೌಡ ಎಂಬಾಕೆ ಸಂಕಷ್ಟ ತಂದಿದ್ದು, ಚಿನ್ನದ ವ್ಯಾಪಾರಿಗೆ ಆಕೆ ಕೋಟ್ಯಂತರ ರು. ವಂಚನೆ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ.

‘ತಾನು ವಂಚಿಸಿ ಸಂಪಾದಿಸಿದ್ದ ಚಿನ್ನದಲ್ಲಿ ವರ್ತೂರು ಪ್ರಕಾಶ್‌ ಅವರಿಗೆ ಸಹ ಪಾಲು ಕೊಟ್ಟಿದ್ದೇನೆ. ನನಗೆ ಚಿನ್ನದ ವ್ಯಾಪಾರಿ ಸಂಜಯ್ ಬಾಪ್ನ ಅವರನ್ನು ಮಾಜಿ ಸಚಿವರೇ ಪರಿಚಯಿಸಿದ್ದರು’ ಎಂದು ವಿಚಾರಣೆ ವೇಳೆ ಆರೋಪಿ ಶ್ವೇತಾಗೌಡ ಹೇಳಿಕೆ ಕೊಟ್ಟಿದ್ದಾಳೆ. ಈ ಹೇಳಿಕೆ ಹಾಗೂ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಮಾಜಿ ಸಚಿವರಿಗೆ ಸಂಕಷ್ಟ ತಂದಿವೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಈ ನಡುವೆ ಸೋಮವಾರ ವಿಚಾರಣೆಗೆ ಪ್ರಕಾಶ್ ಗೈರಾಗಿದ್ದಾರೆ.

ವಂಚನೆ ಪ್ರಕರಣ ಸಂಬಂಧ ನೋಟಿಸ್‌ ಹಿನ್ನೆಲೆಯಲ್ಲಿ ಸೋಮವಾರ ತನಿಖಾಧಿಕಾರಿ ಹಾಗೂ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ಅವರ ಮುಂದೆ ವಿಚಾರಣೆಗೆ ವರ್ತೂರು ಪ್ರಕಾಶ್ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಎರಡನೇ ಬಾರಿ ನೋಟಿಸ್ ಅನ್ನು ಎಸಿಪಿ ಗೀತಾ ನೀಡಿದ್ದು, ಮತ್ತೆ ವಿಚಾರಣೆಗೆ ಗೈರಾದರೆ ಮಾಜಿ ಸಚಿವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶ್ವೇತಾಗೌಡ ಸಮಾಜ ಸೇವಕಿ ಎಂದು ತಮಗೆ ಪರಿಚಯವಾಗಿದ್ದಳು. ಆದರೆ ಆಕೆಯ ವಂಚನೆ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಶನಿವಾರ ಮಾಜಿ ಸಚಿವರು ಹೇಳಿಕೆ ಕೊಟ್ಟಿದ್ದರು. ಆದರೆ ಸೋಮವಾರ ದಿನವಿಡೀ ಎಸಿಪಿ ಕಚೇರಿ ಕಡೆ ಅವರು ಸುಳಿದಿಲ್ಲ ಎಂದು ತಿಳಿದು ಬಂದಿದೆ.

6 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹ:

ಆರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶ್ವೇತಾಗೌಡಳಿಗೆ ವರ್ತೂರು ಪ್ರಕಾಶ್ ಪರಿಚಯವಾಗಿದ್ದರು. ತಾನಾಗಿಯೇ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮಾಜಿ ಸಚಿವರನ್ನು ಸ್ನೇಹದ ಬಲೆಗೆ ಶ್ವೇತಾ ಬೀಳಿಸಿಕೊಂಡಿದ್ದಳು. ಬಳಿಕ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಪರಸ್ಪರ ಚಾಟಿಂಗ್ ಶುರುವಾಗಿದ್ದು, ಬಳಿಕ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ವಿನಿಮಯವಾಗಿ ವಾಟ್ಸಾಪ್‌ ಮಾತುಕತೆ ಮುಂದುವರೆದಿತ್ತು. ಕಳೆದ ನಾಲ್ಕೈದು ತಿಂಗಳಿಂದ ಶ್ವೇತಾ ಹಾಗೂ ವರ್ತೂರು ಪ್ರಕಾಶ್ ನಡುವೆ ಆತ್ಮೀಯ ಒಡನಾಟವಿತ್ತು. ಈ ಸ್ನೇಹದ ವಿಚಾರವಾಗಿ ಇಬ್ಬರ ನಡುವೆ ಚಾಟಿಂಗ್ ವಿವರ ಹಾಗೂ ಪೋಟೋಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ವ್ಯಾಪಾರಿ ಪರಿಚಯ:

ಕಮರ್ಷಿಯಲ್‌ ಸ್ಟ್ರೀಟ್‌ನ ನವರತ್ನ ಜ್ಯುವೆಲರ್ಸ್ ಮಾಲಿಕ ಸಂಜಯ್ ಬಾಪ್ನ ಅವರನ್ನು ಶ್ವೇತಾ ಗೌಡಳಿಗೆ ವರ್ತೂರು ಪ್ರಕಾಶ್‌ ಅವರೇ ಪರಿಚಯಿಸಿದ್ದರು. ವರ್ತೂರು ಪ್ರಕಾಶ್ ಅವರ ಮಧ್ಯಸ್ಥಿಕೆಯಲ್ಲೇ ಚಿನ್ನಾಭರಣ ವ್ಯವಹಾರ ನಡೆದಿದೆ. ಹೀಗಾಗಿಯೇ ಡಾಲರ್ಸ್‌ ಕಾಲೋನಿಯಲ್ಲಿದ್ದ ಮಾಜಿ ಸಚಿವರ ಮನೆಗೆ 2.42 ಕೋಟಿ ರು. ಮೌಲ್ಯದ 2.945 ಕೆ.ಜಿ ಬಂಗಾರದ ಒಡವೆಗಳನ್ನು ನವರತ್ನ ಜುವೆಲರ್ಸ್ ಮಳಿಗೆ ಸಿಬ್ಬಂದಿ ತಲುಪಿಸಿದ್ದರು. ಕರ್ಮಷಿಯಲ್‌ ಸ್ಟ್ರೀಟ್‌ ರಸ್ತೆಯಲ್ಲಿರುವ ಜ್ಯುವೆಲರ್ಸ್‌ಗೆ ಆರೋಪಿ ಜತೆ ವರ್ತೂರು ಪ್ರಕಾಶ್ ಭೇಟಿ ನೀಡಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.

ಕೋಲಾರ ಬಿಜೆಪಿ ನಾಯಕನಿಗೆ ತಲೆಬಿಸಿ

ಕೋಲಾರ ಜಿಲ್ಲೆಯ ಬಿಜೆಪಿ ನಾಯಕನಿಗೆ ಸಹ ಶ್ವೇತಾಗೌಡಳನ್ನು ವರ್ತೂರು ಪ್ರಕಾಶ್‌ ಅವರೇ ಪರಿಚಯ ಮಾಡಿಕೊಟ್ಟಿದ್ದರು. ಈ ಪರಿಚಯದ ಬಳಿಕ ಆ ಬಿಜೆಪಿ ಮುಖಂಡನ ಜತೆ ಆಕೆ ಆತ್ಮೀಯವಾಗಿದ್ದಳು. ಈ ಸ್ನೇಹದ ಕಾರಣಕ್ಕೆ ತಮ್ಮ ಕಾರಿನಲ್ಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಶ್ವೇತಾಗೌಡಳನ್ನು ಕೋಲಾರದ ಬಿಜೆಪಿ ನಾಯಕ ಕಳುಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ನಾಯಕ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು ಎಂದು ಮೂಲಗಳು ಹೇಳಿವೆ.

ಪ್ರಕರಣದಲ್ಲಿ ಕಾರು ಬಳಕೆ ಸಂಬಂಧ ಕೋಲಾರ ಬಿಜೆಪಿ ನಾಯಕನಿಗೆ ಕೂಡ ಪೊಲೀಸರ ತನಿಖೆ ತಲೆಬಿಸಿ ತಂದಿದ್ದು, ಅವರಿಗೂ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ಶ್ವೇತಾಗೆ ಮಾಜಿ ಸಚಿವರ ಬಾಣಸಿಗನ ಊಟ:

ತಮ್ಮ ಮನೆ ಬಾಣಸಿಗ ಹಾಗೂ ಸಹಾಯಕನನ್ನೇ ಶ್ವೇತಾಗೌಡಳ ಮನೆಯಲ್ಲಿ ಅಡುಗೆ ತಯಾರಿಕೆಗೆ ಮಾಜಿ ಸಚಿವರು ನೇಮಿಸಿದ್ದರು. ತಮಗೆ ಶ್ವೇತಾ ಪರಿಚಯವಾದ ಬಳಿಕ ಆಕೆಯ ಮನೆಗೆ ಕೆಲಸಕ್ಕೆ ತನ್ನ ಬಂಟರನ್ನೇ ನೇಮಿಸಿ ಸ್ನೇಹಿತೆ ಚಲವಲನದ ಮೇಲೆ ಮಾಜಿ ಸಚಿವರು ನಿಗಾ ವಹಿಸಿದ್ದರು. ಇದೂ ಅವರಿಬ್ಬರ ನಡುವಿನ ಆತ್ಮೀಯ ಸ್ನೇಹಕ್ಕೆ ಸಾಕ್ಷ್ಯವಾಗಿದೆ ಎಂದು ಮೂಲಗಳು ಹೇಳಿವೆ.