ಗ್ಯಾಸ್ ಕಟರ್‌ನಿಂದ ಜುವೆಲ್ಲರಿ ಅಂಗಡಿ ಶಟರ್‌ ಕತ್ತರಿಸಿ ಕಳ್ಳತನಕ್ಕೆ ದುಷ್ಕರ್ಮಿಗಳ ವಿಫಲ ಯತ್ನ

| Published : Sep 15 2024, 01:55 AM IST / Updated: Sep 15 2024, 04:32 AM IST

ಸಾರಾಂಶ

ಬನಶಂಕರಿಯಲ್ಲಿರುವ ಜುವೆಲ್ಲರಿ ಅಂಗಡಿಯೊಂದರ ಶೆಟರ್ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

  ಬೆಂಗಳೂರು : ದುಷ್ಕರ್ಮಿಗಳಿಬ್ಬರು ಜುವೆಲ್ಲರಿ ಅಂಗಡಿಯೊಂದರ ಕಬ್ಬಿಣದ ಶೆಟರ್‌ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್‌ ಎದುರಿನ 21ನೇ ಮುಖ್ಯರಸ್ತೆಯ ರಾಜಲಕ್ಷ್ಮೀ ಜುವೆಲ್ಲರಿ ಅಂಗಡಿಯಲ್ಲಿ ಸೆ.5ರಂದು ಮುಂಜಾನೆ 1ರಿಂದ 2ರ ನಡುವೆ ಈ ಘಟನೆ ನಡೆದಿದೆ. ಜುವೆಲ್ಲರಿ ಅಂಗಡಿ ಮಾಲೀಕ ಗೋದಾರಾಮ್‌ ಚೌಧರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.5ರಂದು ಮುಂಜಾನೆ ಸುಮಾರು 1 ಗಂಟೆಗೆ ಇಬ್ಬರು ಅಪರಿಚಿತರು ರಾಜಲಕ್ಷ್ಮೀ ಜುವೆಲ್ಲರಿ ಅಂಗಡಿ ಬಳಿ ಬಂದಿದ್ದಾರೆ. ಬಳಿಕ ತಾವು ತಂದಿದ್ದ ಚಿಕ್ಕ ಬ್ಯಾಗ್‌ನಿಂದ ಚಿಕ್ಕ ಗ್ಯಾಸ್‌ ಕಟರ್‌ ತೆಗೆದು ಜುವೆಲ್ಲರಿ ಅಂಗಡಿ ಶೆಟರ್ ಬಾಗಿಲು ಕತ್ತರಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಪಕ್ಕದ ಅಂಗಡಿಯಲ್ಲಿ ಮಲಗಿದ್ದ ಯುವಕರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಜುವೆಲ್ಲರಿ ಅಂಗಡಿ ಬಾಗಿಲ ಬಳಿ ಬೆಳಕು ಕಾಣಿಸಿದೆ.

ಈ ವೇಳೆ ಆ ಯುವಕರು ಕಳ್ಳ ಕಳ್ಳ ಎಂದು ಜೋರಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಜುವೆಲ್ಲರಿ ಅಂಗಡಿ ಶೆಟರ್‌ ಬಾಗಿಲು ಕತ್ತರಿಸುವ ದೃಶ್ಯ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜುವೆಲ್ಲರಿ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.