ಲೈಂಗಿಕ ಸಮಸ್ಯೆ ಪರಿಹಾರ ನೆಪದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗೆ 48 ಲಕ್ಷ ರು. ವಂಚನೆ ಪ್ರಕರಣ ಸಂಬಂಧ ನಕಲಿ ನಾಟಿ ವೈದ್ಯನೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಲೈಂಗಿಕ ಸಮಸ್ಯೆ ಪರಿಹಾರ ನೆಪದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗೆ 48 ಲಕ್ಷ ರು. ವಂಚನೆ ಪ್ರಕರಣ ಸಂಬಂಧ ನಕಲಿ ನಾಟಿ ವೈದ್ಯನೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯ್ ಗುರೂಜಿ ಬಂಧಿತನಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆತನ ಸಹಚರನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿಗೆ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಹಣ ವಸೂಲಿ ಮಾಡಿ ಆರೋಪಿ ವಂಚಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ವಿಜಯ್‌ ಗುರೂಜಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?:

ಲೈಂಗಿಕ ಸಮಸ್ಯೆ ಸಲುವಾಗಿ ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಉಲ್ಲಾಳ ರಸ್ತೆಯ ಕೆಎಲ್‌ಇ ಕಾನೂನು ಮಹಾವಿದ್ಯಾಲಯ ಸಮೀಪ ಆಯುರ್ವೇದಿಕ್ ಟೆಂಟ್‌ನಲ್ಲಿ ಆರೋಪಿ ಪರಿಚಯವಾಗಿದೆ. ಈ ವೇಳೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದಾಗಿ ನಂಬಿಸಿದ್ದ ಆತ, ಔಷಧ ನೆಪದಲ್ಲಿ ಸಂತ್ರಸ್ತನಿಂದ ಲಕ್ಷಾಂತರ ರು. ಹಣ ಪೀಕಿ ಟೋಪಿ ಹಾಕಿದ್ದ.

ಈ ಔಷಧ ಸ್ವೀಕರಿಸಿದ ದೂರುದಾರ ಆರೋಗ್ಯದ ದುಷ್ಪರಿಣಾಮ ಬೀರಿತ್ತು. ಈ ಮೋಸದ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ದೂರು ದಾಖಲಿಸಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಟೆಂಟ್ ಕಿತ್ತು ಪರಾರಿಯಾಗಿದ್ದ ವಿಜಯ್ ಗುರೂಜಿಯನ್ನು ಸೆರೆ ಹಿಡಿದಿದ್ದಾರೆ.

ಆರೋಪಿಯಿಂದ ವಂಚನೆ ಹಣ ಜಪ್ತಿಯಾಗಬೇಕಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆತನ ಸಹಚರನ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.