ಕುಟುಂಬ ಕಲಹ: ಮಗನೇ ದೊಡ್ಡಮ್ಮನ ಕತ್ತು ಕೊಯ್ದು ಹತ್ಯೆ..!

| Published : Jun 24 2024, 01:34 AM IST / Updated: Jun 24 2024, 03:44 AM IST

ಕುಟುಂಬ ಕಲಹ: ಮಗನೇ ದೊಡ್ಡಮ್ಮನ ಕತ್ತು ಕೊಯ್ದು ಹತ್ಯೆ..!
Share this Article
  • FB
  • TW
  • Linkdin
  • Email

ಸಾರಾಂಶ

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮಗನೇ ದೊಡ್ಡಮ್ಮನ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಗರದ ಆನೆಕೆರೆ ಬೀದಿಯಲ್ಲಿ ನಡೆದಿದೆ.

 ಮಂಡ್ಯ ; ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮಗನೇ ದೊಡ್ಡಮ್ಮನ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಗರದ ಆನೆಕೆರೆ ಬೀದಿಯಲ್ಲಿ ನಡೆದಿದೆ.

ಆನೆಕೆರೆ ಬೀದಿ ನಿವಾಸಿ ಕೆಂಪಮ್ಮ (80) ಎಂಬಾಕೆಯೇ ಕೊಲೆಯಾದ ವೃದ್ಧೆ. ಈಕೆಯ ಮೈದುನ ರಾಮಕೃಷ್ಣನ ಮಗ ಹರೀಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಕೆಂಪಮ್ಮನಳ ಗಂಡ ತೀರಿಹೋಗಿದ್ದ ಕಾರಣ ರಾಮಕೃಷ್ಣ ಅವರ ಮನೆಯಲ್ಲೇ ವಾಸವಾಗಿದ್ದಳು. ಹರೀಶನ ತಾಯಿ ಗಂಡನಿಂದ ದೂರವಾಗಿದ್ದಳು. ಇದಕ್ಕೆ ಕೆಂಪಮ್ಮನೇ ಕಾರಣ ಎಂಬ ದ್ವೇಷ ಹರೀಶನಿಗೆ ಇತ್ತು. ತಂದೆ ಕೆಲಸಕ್ಕೆ ಹೋಗಿದ್ದ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಆಗಮಿಸಿದ ಹರೀಶ ಕೆಂಪಮ್ಮನೊಂದಿಗೆ ಮಾತಿನ ಚಕಮಕಿ ನಡೆಸಿದ್ದನು. ನಂತರ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಕೆಂಪಮ್ಮಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ತಾನು ಕೊಲೆ ಮಾಡಿರುವ ಸುದ್ಧಿಯನ್ನು ಆರೋಪಿಯ ತಂದೆ ಮತ್ತು ಅಕ್ಕಪಕ್ಕದ ಮನೆಯವರಿಗೆ ಪೋನ್ ಕರೆ ಮಾಡಿ ತಿಳಿಸಿ ಮನೆಗೆ ಹೋಗಿ ನೋಡುವಂತೆ ಮನವಿ ಮಾಡಿದ್ದಾನೆ. ಅದರಂತೆ ನೆರೆಹೊರೆಯವರು ಹೋಗಿ ನೋಡಿದಾಗಿ ಕೆಂಪಮ್ಮ ಕೊಲೆಯಾಗಿರುವುದು ದೃಢಪಟ್ಟಿದೆ. ಜತೆಗೆ, ಸ್ಥಳೀಯರೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ, ಶವ ಪರೀಕ್ಷೆ ಬಳಿಕ ವಾರಸುದಾರರಿಗೆ ಶವ ಒಪ್ಪಿಸಿದ್ದಾರೆ.

ಮಧ್ಯಾಹ್ನದ ಬಳಿಕ ಆರೋಪಿ ಹರೀಶ್ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಚಾಕುವಿನೊಂದಿಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಪಿಎಸ್‌ಐ ಬಿ.ವಿ.ವರ್ಷಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಮದ್ದೂರು: ಪಟ್ಟಣದ ಹೊರವಲಯದ ಮಳವಳ್ಳಿ ರಸ್ತೆಯ ಮರಕಾಡುದೊಡ್ಡಿ ಗೇಟ್ ಬಳಿ ಅಪರಿಚಿತ ವ್ಯಕ್ತಿ ಶವ ಭಾನುವಾರ ಪತ್ತೆಯಾಗಿದೆ. ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿ ಕೆಂಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿದ್ದಾನೆ. ಬಿಳಿ ತಲೆ ಕೂದಲು, ಎಣ್ಣೆಗೆಂಪು ಬಣ್ಣ ಹಾಗೂ ಹಣೆಯ ಮಧ್ಯದಲ್ಲಿ ಎರಡು ಹಳೆ ಗಂಟು ಗಾಯದ ಗುರುತಿದೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.