ಸಾರಾಂಶ
ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
*ನಿವೃತ್ತ ಸೈನಿಕನಾಗಿದ್ದ ಚನ್ನಬಸವಯ್ಯ ಖಾಸಗಿ ಕಂಪನಿಯಲ್ಲಿ ಕಾವಲುಗಾರ
*ಕುಟುಂಬದೊಂದಿಗೆ ತಿಗಳರಪಾಳ್ಯದ ಬಾಲಾಜಿನಗರದಲ್ಲಿ ಬಸವಯ್ಯ ವಾಸ*ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ್ದ ಪುತ್ರ, ಕೆಲಸವಿಲ್ಲದೆ ಅಲೆದಾಟ
*ಡ್ರಗ್ಸ್, ಮದ್ಯ ವ್ಯಸನಿಯಾಗಿದ್ದ ಪುತ್ರನಿಗೆ ತಂದೆಯಿಂದ ಬುದ್ಧವಾದ, ಕೊಲೆಕನ್ನಡಪ್ರಭ ವಾರ್ತೆ ಬೆಂಗಳೂರು
ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಿಗಳರಪಾಳ್ಯದ ಬಾಲಾಜಿನಗರದ ನಿವಾಸಿ ಅಮಿತ್ ಬಂಧಿತನಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆ ಚನ್ನಬಸವಯ್ಯ (61) ಮೇಲೆ ಸೋಮವಾರ ಸಂಜೆ ಹಲ್ಲೆ ನಡೆಸಿ ಆತ ಕೊಂದಿದ್ದ. ಈ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ಮಾಜಿ ಸೈನಿಕ ಚನ್ನಬಸವಯ್ಯ ಕುಟುಂಬದ ಜತೆ ಬಾಲಾಜಿ ನಗರದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಕಾವಲುಗಾರರಾಗಿದ್ದರು. ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಮಗ ಅಮಿತ್ ಕೆಲಸವಿಲ್ಲದೆ ಅಲೆಯುತ್ತಿದ್ದ. ವಿಪರೀತ ಮದ್ಯ ಹಾಗೂ ಮಾದಕ ವ್ಯಸನಿ ಸಹ ಆಗಿದ್ದ. ಹೀಗಾಗಿ ಮಗನಿಗೆ ಆಗಾಗಾ ಬೈದು ಚನ್ನಬಸವಯ್ಯ ಬುದ್ಧಿ ಮಾತು ಹೇಳುತ್ತಿದ್ದರು.ಸೋಮವಾರ ಸಂಜೆ 5 ಗಂಟೆಯಲ್ಲಿ ಸಹ ಮಗನಿಗೆ ಬುದ್ಧಿ ಮಾತು ಹೇಳಿದ್ದಾರೆ. ಆಗ ತಂದೆ-ಮಗನ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಆರೋಪಿ, ತನ್ನ ತಂದೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಚನ್ನಬಸವಯ್ಯ ಅವರನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.