ಸಾರಾಂಶ
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೋಡಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಮುನ್ನ ಎಚ್ಚರ. ಏಕೆಂದರೆ, ಯುಟ್ಯೂಬ್ ಚಾನೆಲ್‌ವೊಂದರ ಜಾಹೀರಾತು ನೋಡಿ ಆನ್‌ಲೈನ್‌ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ.
ರಾಜ್ಯದ ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೆ ಒಳಗಾದ ಐಎಎಸ್ ಅಧಿಕಾರಿ. ಇವರು ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಕೈಂ ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?:
ಕಳೆದ ತಿಂಗಳು ಪೂರ್ಣಿಮಾ ಕಲೆಕ್ಷನ್ ಎಂಬ ಯಟ್ಯೂಬ್ ಚಾನೆಲ್ ನೋಡುವಾಗ ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಬಗ್ಗೆ ಜಾಹೀರಾತು ಕಂಡು ಬಂದಿದೆ. ಈ ಸೀರೆ ಖರೀದಿಸುವ ಉದ್ದೇಶದಿಂದ ಪಲ್ಲವಿ ಅಕುರಾತಿ ಅವರು ಈ ಸೀರೆಯ ಸ್ಕೀನ್ ಶಾಟ್ ಫೋಟೋ ತೆಗೆದು ಪೂರ್ಣಿಮಾ ಕಲೆಕ್ಷನ್ ವಾಟ್ಸಾಪ್‌ಗೆ ಕಳುಹಿಸಿದ್ದಾರೆ. ಜತೆಗೆ ಆನ್‌ಲೈನ್ ಮುಖಾಂತರ ಮಾ.10ರಂದು ₹850 ಪಾವತಿಸಿದ್ದಾರೆ.
ಆದರೆ, ಒಂದು ತಿಂಗಳು ಕಳೆದರೂ ಸೀರೆ ಕಳುಹಿಸಿಕೊಟ್ಟಿಲ್ಲ. ಈ ಸಂಬಂಧ ವಿಚಾರಿಸಲು ಕರೆ ಮಾಡಿದರೂ ಪ್ರತಿಕ್ರಿಯಿಸಿಲ್ಲ. ಸಂದೇಶ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಲ್ಲವಿ ಅಕುರಾತಿ ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮಂತೆಯೇ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.