ಸಾರಾಂಶ
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡಸರಿಗೆ ಸೀರೆ ಉಡಿಸಿ ಮಹಿಳೆಯರು ಪಾಲ್ಗೊಂಡ ದಾಖಲೆ ತೋರಿಸಿ ಹಣ ಲಪಟಾಯಿಸಲು ನಡೆದ ಸಂಚೊಂದು ಬಹಿರಂಗವಾಗಿದೆ.
ಯಾದಗಿರಿ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡಸರಿಗೆ ಸೀರೆ ಉಡಿಸಿ ಮಹಿಳೆಯರು ಪಾಲ್ಗೊಂಡ ದಾಖಲೆ ತೋರಿಸಿ ಹಣ ಲಪಟಾಯಿಸಲು ನಡೆದ ಸಂಚೊಂದು ಬಹಿರಂಗವಾಗಿದೆ. ಯಾದಗಿರಿ ಸಮೀಪದ ಮಲ್ಹಾರ್ ಗ್ರಾಮದಲ್ಲಿ ಸಣ್ಣ ಲಿಂಗಪ್ಪ ಹೊಲದಲ್ಲಿ 3 ಲಕ್ಷ ರು.ಗೆ ನಾಲೆ ಹೂಳೆತ್ತುವ ಕಾಮಗಾರಿ ಮಂಜೂರಾಗಿತ್ತು.
ನರೇಗಾ ಕಾಮಗಾರಿಯಲ್ಲಿ ಮಹಿಳೆಯರೂ ಪಾಲ್ಗೊಳ್ಳಬೇಕೆಂಬ ನಿಯಮ ಪಾಲಿಸಲು ಗಂಡಸರಿಗೇ ಸೀರೆ ಊಡಿಸಿ ಹೆಂಗಸರ ಲೆಕ್ಕದಲ್ಲಿ ಹಣ ಲಪಟಾಯಿಸಲು ಸಂಚು ನಡೆಸಿರುವ ಬಗ್ಗೆ ಭಾವಚಿತ್ರಗಳು ಸಾಮಾಜಿಕ ಜಾಲತಾಣ-ಮಾಧ್ಯಮಗಳಲ್ಲಿ ಸೋಮವಾರ ಹರಿದಾಡಿ ಸಂಚಲನ ಮೂಡಿಸಿದ್ದವು. ನಾಲ್ವರು ಪುರುಷರಿಗೆ ಸೀರೆ ಉಡಿಸಿ ಕೂಲಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಆರೋಪ ಕೇಳಿ ಬಂದಿದ್ದವು. ಈ ಬಗ್ಗೆ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಡಿಯಾ, ಫೆಬ್ರವರಿಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ಆಗಲೇ ಬಂದ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ವೀರೇಶ ಎಂಬ ಹೊರಗುತ್ತಿಗೆ ನೌಕರನನ್ನು ಅಮಾನತು ಮಾಡಲಾಗಿದೆ. ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.