ಸಾರಾಂಶ
ಮಂಡ್ಯ : ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ್ದ ದೃಶ್ಯವನ್ನು ಕಿಡಿಗೇಡಿಗಳು ಡ್ರೋನ್ ಬಳಸಿ ಸೆರೆ ಹಿಡಿದು ವಿಕೃತಿ ಮೆರೆದಿರುವ ಘಟನೆ ಈಚೆಗೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಡ್ರೋನ್ ಬಳಸಿ ದೃಶ್ಯವನ್ನು ಸೆರೆಹಿಡಿದವರು ಕಾರು, ಬೈಕ್‌ಗಳಲ್ಲಿ ಪರಾರಿಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ನೂರಾರು ನರೇಗಾ ಕೂಲಿ ಕಾರ್ಮಿಕ ಮಹಿಳೆಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ ತಾಲೂಕು ಅಕ್ಕಿ ಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಶ್ರವಣಹಳ್ಳಿ, ಚಿಕ್ಕಮಂದಗೆರೆ, ಹೊನ್ನೇನಹಳ್ಳಿಯ ಸುಮಾರು ೧೨೦ ಮಂದಿ ಕೂಲಿ ಕಾರ್ಮಿಕರು ತೊಡಗಿದ್ದರು. ಇದರಲ್ಲಿ ೧೦೦ ಸಂಖ್ಯೆಯಷ್ಟು ಮಹಿಳಾ ಕೂಲಿ ಕಾರ್ಮಿಕರೇ ಇದ್ದರು.
ಕಾಮಗಾರಿ ವೇಳೆ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ಸಮಯದಲ್ಲಿ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆಯ ಏರಿ ಮೇಲೆ ನಿಂತು ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ ಎಂದು ಕೂಲಿಕಾರ ಮಹಿಳೆಯರು ಆರೋಪಿಸಿದ್ದಾರೆ.
ಶೌಚಕ್ಕೆ ತೆರಳಿದ್ದ ವೇಳೆ ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಮಹಿಳಾ ಕೂಲಿ ಕಾರ್ಮಿಕರು ಎಚ್ಚೆತ್ತುಕೊಂಡು ಯಾರು.. ಯಾರು.. ಅಂತ ಕೂಗಿಕೊಂಡು ಬರುವಷ್ಟರಲ್ಲಿ ಕಿಡಿಗೇಡಿಗಳು ಕಾರು, ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಓಡಿಹೋದವರಲ್ಲಿ ಚಿಕ್ಕಮಂದಗೆರೆಯ ಗಣೇಶ, ಗುಂಡಣ್ಣ, ನವೀನ ಎಂಬ ಬಗ್ಗೆ ಮಹಿಳೆಯರು ಸುಳಿವು ನೀಡಿದ್ದಾರೆ.
ಕೂಲಿಕಾರ ಮಹಿಳೆಯರಿಂದ ಪ್ರತಿಭಟನೆ:
ಶೌಚದ ದೃಶ್ಯವನ್ನು ಡ್ರೋನ್ ಬಳಸಿ ಸೆರೆಹಿಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸ್ಥಳದಲ್ಲೇ ನೂರಾರು ಕೂಲಿಕಾರ ಮಹಿಳೆಯರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮಂದಗೆರೆ ಗ್ರಾಪಂ ಪಿಡಿಒ ಸುವರ್ಣ ಭೇಟಿ ನೀಡಿ ನೊಂದ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ನಂತರ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿ ಸುಮ್ಮನಾಗಿದ್ದಾರೆ. ಈ ಸಂಬಂಧ ಲಿಖಿತ ದೂರನ್ನು ನೀಡದ ಹಿನ್ನೆಲೆಯಲ್ಲಿ ಈವರೆಗೆ ಪೊಲೀಸ್ ದೂರು ದಾಖಲಾಗಿಲ್ಲವೆಂದು ತಿಳಿದುಬಂದಿದೆ.ಮಹಿಳೆಯರು ಶೌಚಕ್ಕೆ ತೆರಳಿದಾಗ ಡ್ರೋನ್ ಬಳಸಿ ದೃಶ್ಯ ಸೆರೆಹಿಡಿದಿದ್ದಾರೆಂಬ ವಿಷಯ ನನ್ನ ಗಮನಕ್ಕೂ ಬಂದಿದೆ. ಈ ವಿಷಯವಾಗಿ ಮಂದಗೆರೆ ಪಿಡಿಒ ಅವರನ್ನು ಸ್ಥಳಕ್ಕೆ ಕಳುಹಿಸಿದ್ದು ಮಹಿಳಾ ಕೂಲಿ ಕಾರ್ಮಿಕರಿಂದ ಲಿಖಿತ ದೂರನ್ನು ಪಡೆದು ಕ್ರಮ ವಹಿಸುವಂತೆ ಸೂಚಿಸಿದ್ದೇನೆ.
- ಕೆ.ಸುಷ್ಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ, ಕೆ.ಆರ್.ಪೇಟೆಡ್ರೋನ್ ಬಳಸಿ ಮಹಿಳೆಯರ ಶೌಚದೃಶ್ಯ ಸೆರೆಹಿಡಿದಿರುವ ಬಗ್ಗೆ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದೇನೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೂ ತಂದಿರುವೆ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ಕೂಲಿ ಕಾರ್ಮಿಕರು ಲಿಖಿತ ದೂರು ನಮಗೆ ನೀಡಿಲ್ಲ. ಅವರಿಂದ ದೂರು ಬಂದರೆ ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸುತ್ತೇನೆ.
- ಸುವರ್ಣ, ಪಿಡಿಒ, ಮಂದಗೆರೆ ಗ್ರಾಪಂನಾವು ಬೇವಿನಹಳ್ಳಿ ಕೆರೆ ಕೆಲಸಕ್ಕಾಗಿ ಬಂದಿದ್ದೆವು. ಶ್ರವಣಹಳ್ಳಿ, ಹೊನ್ನೇನಹಳ್ಳಿಯವರೂ ಕೆಲಸ ಮಾಡುತ್ತಿದ್ದರು. ನಾವು ಶೌಚಾಲಯಕ್ಕೆಂದು ಕೆರೆಯ ಅತ್ತ-ಇತ್ತ ಹೋಗಿದ್ದೆವು. ಕೆರೆ ಏರಿ ಮೇಲೆ ನಿಂತು ಡ್ರೋನ್ ಬಿಟ್ಟು ನಾವೇನು ಮಾಡುತ್ತಿದ್ದೆವೋ ಅದನ್ನು ಸೆರೆಹಿಡಿಯುತ್ತಿದ್ದರು. ಅದನ್ನು ನೋಡಿ ಯಾರು ಯಾರು ಅಂತ ಕೂಗಿಕೊಂಡು ಹೋಗುವಷ್ಟರಲ್ಲಿ ಕಾರು-ಬೈಕ್‌ಗಳಲ್ಲಿ ಓಡಿಹೋದರು. ನಮ್ಮ ಕೈಗೆ ಸಿಗಲಿಲ್ಲ. ನಮಗೆ ನ್ಯಾಯ ಕೊಡಿಸಬೇಕು.
- ನೀಲಮ್ಮ, ಕೂಲಿಕಾರ ಮಹಿಳೆ
)
)
;Resize=(128,128))
;Resize=(128,128))
;Resize=(128,128))